ಉಡುಪಿ ತಾಲೂಕಿನಲ್ಲಿ ಶೇ.93ರಷ್ಟು ಭಿತ್ತನೆ ಕಾರ್ಯ ಪೂರ್ಣ

udp-TP
Published on

ಉಡುಪಿ: ಉಡುಪಿ, ಕಾಪು, ಬ್ರಹ್ಮಾವರ ತಾಲೂಕಿನಲ್ಲಿ ಶೇ.93ರಷ್ಟು ಭಿತ್ತನೆ ಕಾರ್ಯಪೂರ್ಣಗೊಂಡಿದ್ದರೂ ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಗೊಬ್ಬರ ತೆಗೆದುಕೊಳ್ಳಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಈ ಬಾರಿ ವಾಡಿಕೆಗಿಂತ ಸುಮಾರು 538 ಮಿಮೀ ಮಳೆ ಕಡಿಮೆಯಾಗಿದ್ದು, ದಿನಕ್ಕೆ ಸರಾಸರಿ 10 ರಿಂದ 20 ಎಂಎಂ ಮಳೆಯಾಗದಿದ್ದರೆ ಶೇ.5 ರಿಂದ 10ರಷ್ಟು ಇಳುವರಿ ಕುಂಠಿತವಾಗುವ ಸಾಧ್ಯತೆಗಳಿವೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೆಶಕ ಮೋಹನ್​ ರಾಜ್​ ಹೇಳಿದರು.

ಸೋಮವಾರ ಉಡುಪಿ ತಾಪಂ ಸಾಮಾನ್ಯ ಸಭೆ ಆಡಳಿತಾಧಿಕಾರಿ, ಅಹಾರ ಇಲಾಖೆ ಉಪನಿರ್ದೇಶಕ ರವೀಂದ್ರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಳೆದ ತಿಂಗಳು ಮಳೆಗೆ ಕೋಟ ಮತ್ತು ಕಾಪು ಭಾಗದಲ್ಲಿ 52.07 ಹಕ್ಟೆರ್​ ಪ್ರದೇಶದಲ್ಲಿ ಕೃಷಿಗೆ ಹಾನಿಯಾಗಿದ್ದು, ಬೆಳೆ ಹಾನಿ ಮಾಹಿತಿಯನ್ನು ಸಲ್ಲಿಕೆ ಮಾಡಲಾಗಿದೆ. ಕಂದಾಯ ಇಲಾಖೆಯಿಂದ ನೇರವಾಗಿ ರೈತರ ಖಾತೆಗೆ ಪರಿಹಾರ ವಿತರಣೆಯಾಗಲಿದೆ. ಜಿಲ್ಲೆಯಲ್ಲಿ 1.53 ಲಕ್ಷ ರೈತರ ಖಾತೆಗೆ ಪಿಎಂ ಕಿಸಾನ್​ ಯೋಜನೆ ಹಣ ಬರುತ್ತಿದ್ದು, ಇ&ಕೆವೈಸಿ ಮಾಡದವರಿಗೆ ಮುಂದಿನ ಬಾರಿಯಿಂದ ಹಣ ಜಮೆಯಾಗುವುದಿಲ್ಲ. ಈಗಾಗಲೇ ತಾಲೂಕಿನಲ್ಲಿ ಶೇ.88ರಷ್ಟು ರೈತರು ಇ&ಕೆವೈಸಿ ಸಲ್ಲಿಸಿದ್ದಾರೆ ಎಂದು ಮಾಹಿತಿ ನೀಡಿದರು.

40 ಕ್ಷೇಮ ಕೇಂದ್ರ ಕಾರ್ಯಾರಂಭ
ತಾಲೂಕು ವೈದ್ಯಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ ಮಾತನಾಡಿ, ಕೇಂದ್ರ ಸರ್ಕಾರ ಉಡುಪಿ, ಕಾಪು, ಬ್ರಹ್ಮಾವರ 3 ತಾಲೂಕಿಗೆ 40 ಕ್ಷೇಮ ಕೇಂದ್ರಗಳನ್ನು ಮಂಜೂರು ಮಾಡಿದ್ದು, ಎಲ್ಲಾ ಕಡೆಗಳಲ್ಲಿ ಕಮ್ಯುನಿಟಿ ಹೆಲ್ತ್​ ಆಫಿಸರ್​ (ವೈದ್ಯರು) ಹಾಗೂ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಸಾರ್ವಜನಿಕರು ಪ್ರಾಥಮಿಕ ಹಂತದ ಚಿಕಿತ್ಸೆಯನ್ನು ಇಲ್ಲೇ ಪಡೆಯಬಹುದು. ಇಲ್ಲಿಗೆ ಬೇಕಾದಷ್ಟು ಔಷಧಗಳನ್ನು ಪೂರೈಸಲಾಗಿದೆ. ಕಳೆದ 3 ತಿಂಗಳಲ್ಲಿ ನಗರದಲ್ಲಿ 14 ಹಾಗೂ ತಾಲೂಕಿನಲ್ಲಿ 26 ಡೆಂಗ್ಯೂ ಹಾಗೂ 2 ಮಲೇರಿಯಾ ಪ್ರಕರಣ ಪತ್ತೆಯಾಗಿದೆ ಎಂದರು.
ಗೃಹಜ್ಯೋತಿಗೆ 38 ಸಾವಿರ ಅರ್ಜಿ
ತಾಲೂಕಿನಲ್ಲಿ ಗೃಹಜ್ಯೋತಿ ಯೋಜನೆಯಲ್ಲಿ ಈವರೆಗೆ 38 ಸಾವಿರ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಕಳೆದ ಮಳೆಗಾಲದಲ್ಲಿ 68.7 ಲಕ್ಷ ರೂ. ಮೊತ್ತದ ವಿದ್ಯುತ್​ ಹಾನಿ ಸಂಭವಿಸಿದೆ. ಆಲೆವೂರು ಗ್ರಾಪಂನಿಂದ 8.4 ಲಕ್ಷ ರೂ. ಸೇರಿದಂತೆ ವಿವಿಧ ಗ್ರಾಪಂಗಳಿಂದ ಒಟ್ಟು 11 ಲಕ್ಷ ರೂ. ವಿದ್ಯುತ್​ ಬಿಲ್​ ಬಾಕಿ ಇದ್ದು, ಶ್ರೀ ಪಾವತಿಸುವಂತೆ ತಾಪಂ ನಿಂದ ಸೂಚನೆ ನೀಡಬೇಕು ಎಂದು ಮೆಸ್ಕಾಂ ಅಧಿಕಾರಿ ಹೇಳಿದರು.

ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ ಅನುಷಾ ಮಾತನಾಡಿ, ತಾಲೂಕಿನಲ್ಲಿ ಈ ವರ್ಷ 20 ಕಿಮೀ ನಡುತೋಪು ಬೆಳೆಸಲಾಗಿದ್ದು, 5 ಕಿಮೀ ನಡುತೋಪು ಪುನರುಜ್ಜೀವನಗೊಳಿಸಲಾಗಿದೆ. ರೈತರಿಗೆ ಸಬ್ಸಿಡಿ ದರದಲ್ಲಿ ಗಿಡಗಳನ್ನು ಪೂರೈಕೆ ಮಾಡಲು 34,000 ಹಣ್ಣಿನ ಗಿಡಗಳು, ಸಾಗುವಾನಿ, ಕಿರಾಲ್ಬೋಗಿ, ಬೀಟೆ ಮುಂತಾದ ಮರಗಳನ್ನು ಬೆಳೆಸಲಾಗಿದೆ. ಇದರಲ್ಲಿ ಶೇ.70ರಷ್ಟು ಗಿಡಗಳು ಈಗಾಗಲೇ ಮಾರಾಟವಾಗಿವೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಮಾತನಾಡಿ, ತಾಲೂಕಿನಲ್ಲಿ 6 ತಿಂಗಳಿನಿಂದ 3ವರ್ಷದೊಳಗೆ ಶೇ.96ರಷ್ಟು ಮಕ್ಕಳಿಗೆ ಹಾಗೂ 3 ರಿಂದ 6ವರ್ಷದೊಳಗಿನ ಶೇ.68ರಷ್ಟು ಮಕ್ಕಳಿಗೆ ಪೂರಕ ಪೌಷ್ಟಿಕ ಅಹಾರ ವಿತರಿಸಲಾಗಿದೆ. ತಾಲೂಕಿನಲ್ಲಿ ಅಂಗನವಾಡಿಗಳಲ್ಲಿ ಶೇ.99ರಷ್ಟು ಕಾರ್ಯಕರ್ತೆಯರು ಹಾಗೂ ಶೇ.93ರಷ್ಟು ಸಹಾಯಕಿಯರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತಾಧಿಕಾರಿ, ಎಲ್ಲೆಲ್ಲಿ ಸಹಾಯಕಿಯರ ಕೊರತೆ ಇದೆ ಅಂಥ ಅಂಗನವಾಡಿಗಳ ಬಗ್ಗೆ ಅಯಾ ಗ್ರಾಪಂ ಸದಸ್ಯರಿಗೆ ಮಾಹಿತಿ ನೀಡಿ, ಅವರ ಸಹಾಯಪಡೆದು ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು. ಅಂಗನವಾಡಿ ಕಟ್ಟಡಗಳ ಸುರಕ್ಷತೆ ಬಗ್ಗೆ ಕಾಲಕಾಲಕ್ಕೆ ಪರಿಶೀಲನೆ ನಡೆಸಿ ವರದಿ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ವಿಜಯಾ, ಸಹಾಯಕ ಲೆಕ್ಕಾಧಿಕಾರಿ ಮೆಲ್ವಿನ್​ ತೋಮಸ್​ ಬಾಂಜಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net