ಮನೆಯೇ ಗ್ರಂಥಾಲಯ 'ಅಜೇಯ' ಶತಕ..!

Kasapa-1
Published on

ಮಾದರಿಯಾದ ಕಸಾಪ ಉಡುಪಿ ಘಟಕ

ನೂರಾರು ಮನಗಳಿಗೆ ಕನ್ನಡದ ಕನ್ನಡಕ

ಪ್ರಶಾಂತ ಭಾಗ್ವತ, ಉಡುಪಿ

ಜನರಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಪುಸ್ತಕ ಪ್ರಾಧಿಕಾರ 'ಮನೆಗೊಂದು ಗ್ರಂಥಾಲಯ' ತೆರೆಯುವುದಾಗಿ ತಿಳಿಸಿದೆ. ಆದರೆ, 7 ತಿಂಗಳ ಹಿಂದೆಯೇ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್​ ಘಟಕವು ಮನೆಯೇ ಗ್ರಂಥಾಲಯ ಅಭಿಯಾನ ಆರಂಭಿಸಿದೆ.

Kasapa-2
ಉಡುಪಿಯ ಗಾಂಧಿ ಆಸ್ಪತ್ರೆಯಲ್ಲಿ ಗ್ರಂಥಾಲಯ ಉದ್ಘಾಟನಾ ಕಾರ್ಯಕ್ರಮ.

ಘಟಕದ ಎಲ್ಲ ಪದಾಧಿಕಾರಿಗಳ ಸಹಕಾರದಲ್ಲಿ ಅಧ್ಯಕ್ಷ ರವಿರಾಜ್​ ಎಚ್​.ಪಿ., ಕೆಲವು ಸಂಕುಚಿತ ಮತಿಗಳ ಟೀಕೆಯ ನಡುವೆಯೂ ಸುವ್ಯವಸ್ಥಿತವಾಗಿ 'ಮನೆಯೇ ಗ್ರಂಥಾಲಯ' ಅಭಿಯಾನ ಮುಂದುವರಿಸಿದ್ದಾರೆ. ಉಡುಪಿಯಲ್ಲಿ ಆರಂಭಗೊಂಡ ಅಭಿಯಾನವೀಗ ರಾಜ್ಯಕ್ಕೇ ಮಾದರಿಯಾಗಿದೆ. ಈವರೆಗೆ ಉಡುಪಿ ತಾಲೂಕಿನ 118 ಮನೆಗಳಲ್ಲಿ ಗ್ರಂಥಾಲಯ ತೆರೆಯಲಾಗಿದೆ.

ಅಭಿಯಾನ ಉದ್ಘಾಟನೆ

ಮೇ 21, 2024ರಂದು ಉಡುಪಿ ಬೈಲೂರಿನ ರಂಗನಟ ವಿವೇಕಾನಂದ ಎನ್​. ಅವರ ಮನೆಯಲ್ಲಿ ನಾಡೋಜ ಕೆ.ಪಿ. ರಾವ್​ ಅವರು 'ಮನೆಯೇ ಗ್ರಂಥಾಲಯ ಅಭಿಯಾನಕ್ಕೆ ಚಾಲನೆ ನೀಡಿದ್ದರು. 100 ದಿನದಲ್ಲಿ 100 ಮನೆಗಳಲ್ಲಿ ಗ್ರಂಥಾಲಯ ತೆರೆಯುವ ಅಭಿಯಾನ ಪೂರ್ಣಗೊಂಡಿದೆ. ಇದೀಗ ವಾರಕ್ಕೊಂದು ಮನೆಯಲ್ಲಿ ಗ್ರಂಥಾಲಯ ತೆರೆಯುವ ಅಭಿಯಾನ ಮುಂದುವರಿದಿದೆ.

Kasapa-4

2,600ಕ್ಕೂ ಹೆಚ್ಚು ಪುಸ್ತಕ

ವೈಚಾರಿಕ ಲೇಖನ, ಕಾದಂಬರಿ, ಪುರಾಣ ಗ್ರಂಥ, ಆರೋಗ್ಯ ಮಾಹಿತಿಯ ಪುಸ್ತಕ, ಕವನ ಸಂಕಲನ, ಸಣ್ಣ ಕಥೆಗಳು ಹೀಗೆ ಜ್ಞಾನದಾಯಕವಾಗಬಲ್ಲ ಎಲ್ಲ ಬಗೆಯ ಪುಸ್ತಕಗಳನ್ನು ಉಚಿತವಾಗಿ ನೀಡಲಾಗಿದೆ. ಈ ಕಾರ್ಯಕ್ಕೆ ಅನೇಕರು ಸಹಕಾರವನ್ನೂ ನೀಡಿದ್ದಾರೆ. ಹಲವರ ಮನೆಗಳಲ್ಲಿ ಪುಸ್ತಕಗಳ ಸಂಗ್ರಹವೇ ಇದ್ದು, ಅವುಗಳನ್ನು ಓದುವವರಿಲ್ಲದೆ ಖಾಲಿ ಇತ್ತು. ಅಂತಹವರು ನೀಡಿದ ಪುಸ್ತಕ, ಇತ್ತೀಚೆಗಿನ ಯುವ ಬರಹಗಾರರು ನೀಡಿದ ಪುಸ್ತಕವನ್ನೇ ಅಭಿಯಾನದಲ್ಲಿ ನೀಡಲಾಗಿದೆ. ಈವರೆಗೆ 2,600ಕ್ಕೂ ಅಧಿಕ ಪುಸ್ತಗಳು ಮನೆಗಳಲ್ಲಿ ತೆರೆದ ಗ್ರಂಥಾಲಯಗಳಲ್ಲಿ ಇವೆ.

Kasapa-3
ಡಾ. ಎ.ವಿ. ಬಾಳಿಗಾ ಮೆಮೋರಿಯಲ್​ ಆಸ್ಪತ್ರೆಯಲ್ಲಿ ಗ್ರಂಥಾಲಯ ಆರಂಭಿಸಿದ್ದ ಕ್ಷಣ.

ವಿದೇಶದಲ್ಲೂ ಕನ್ನಡದ ಕಲರವ

ಸಾಗರೋತ್ತರ ದೇಶವೂ ಸಹ ಈ ಅಭಿಯಾನಕ್ಕೆ ಸ್ಪಂದಿಸಿದೆ. ಸಿಂಗಾಪೂರ್​ ಮತ್ತು ಮಲೇಷಿಯಾದಲ್ಲಿರುವ ಉಡುಪಿ ತಾಲೂಕಿನ 10 ಕುಟುಂಬಗಳಲ್ಲೂ ಸಹ ಕಸಾಪದ ವತಿಯಿಂದ 'ಮನೆಯೇ ಗ್ರಂಥಾಲಯ' ತೆರೆದು, ಕನ್ನಡದ ಪುಸ್ತಕ ನೀಡಲಾಗಿದೆ. ಯಾಂತ್ರೀಕೃತ ಬದುಕಿನ ನಡುವೆಯೂ ಆ ಕುಟುಂಬಗಳೀಗ ಕನ್ನಡದ ಪುಸ್ತಕಗಳ ಅವಲೋಕನ ಆರಂಭಿಸಿವೆ.

ಆಸ್ಪತ್ರೆ, ಸಾರ್ವಜನಿಕ ಸ್ಥಳವೂ ಓದುವ ಮನೆ!

Kasapa-8
ಮನೆಗಳಷ್ಟೇ ಅಲ್ಲದೆ 7ಕ್ಕೂ ಅಧಿಕ ಆಸ್ಪತ್ರೆ, ಅಂಗಡಿ, ಶಾಲೆ, ಬಸ್​ ನಿಲ್ದಾಣ​, ಸಾರ್ವಜನಿಕ ಸ್ಥಳಗಳಲ್ಲೂ ಗ್ರಂಥಾಲಯ ತೆರೆದಿರುವುದು ಇನ್ನೊಂದು ವಿಶೇಷ. ಮಾನಸಿಕ ರೋಗಿಗಳಿಗೆ ಉಪಚರಿಸುವ ಉಡುಪಿಯ ಡಾ. ಎ.ವಿ. ಬಾಳಿಗಾ ಮೆಮೋರಿಯಲ್​ ಆಸ್ಪತ್ರೆ, ಗಾಂಧಿ ಹಾಸ್ಪಿಟಲ್, ಲೋಂಬಾರ್ಡ್​ ಆಸ್ಪತ್ರೆಯಲ್ಲೂ ಈಗ ರೋಗಿಗಳಿಗೆ ಕನ್ನಡ ಪುಸ್ತಕ ಓದಲು ಲಭಿಸುತ್ತಿವೆ. ಇಲ್ಲಿನ ಅನೇಕ ಪುಸ್ತಕಗಳು ರೋಗಿಗಳ ಮನ:ಪರಿವರ್ತನೆಗೆ ಹಾಗೂ ಜ್ಞಾನ ಹೆಚ್ಚಳಕ್ಕೆ ಪೂರಕವಾಗಿವೆ ಎಂದು ವೈದ್ಯರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮನೆಯಲ್ಲಿ ಗ್ರಂಥಾಲಯ ತೆರೆಯಲು ಆಸಕ್ತಿ ಇದ್ದವರು ಅಥವಾ ಅಭಿಯಾನಕ್ಕೆ ಪುಸ್ತಕಗಳ ಕೊಡುಗೆ ನೀಡಲು ಬಯಸುವವರು ಮೊ.ಸಂ. 9845240309 ಸಂಪರ್ಕಿಸಬಹುದು ಎಂದು ಉಡುಪಿ ಕಸಾಪ ತಾಲೂಕು ಘಟಕ ತಿಳಿಸಿದೆ.

ಕಸಾಪ ಉಡುಪಿ ಘಟಕ ಕನ್ನಡಪರ ಚಟುವಟಿಕೆಗಳನ್ನು ಅತ್ಯುತ್ಸಾಹದಿಂದ ನಿರಂತರ ಹಮ್ಮಿಕೊಳ್ಳುತ್ತಿದೆ. ಕನ್ನಡ ಭಾಷೆಗಾಗಿ ಕೆಲಸ ಮಾಡುವ ಕಾರ್ಯಕರ್ತರೂ ಅಲ್ಲಿದ್ದಾರೆ. ಅವರ ಅನೇಕ ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದೇನೆ. 'ಮನೆಯೇ ಗ್ರಂಥಾಲಯ ಅಭಿಯಾನ' ನಿಜಕ್ಕೂ ಒಂದಿಷ್ಟು ಮನಸ್ಸುಗಳಿಗೆ ಓದುವಂತೆ ಮಾಡಿದ್ದು ಸುಳ್ಳಲ್ಲ. ನಿತ್ಯ ಮೊಬೈಲ್​ ಹಿಡಿಯುತ್ತಿದ್ದ ಕೆಲವರ ಕೈಗಳಲ್ಲಿ ಕೆಲಹೊತ್ತು ಕನ್ನಡದ ಪುಸ್ತಕ ಇರುವಂತಾಗಿದೆ. ಉಡುಪಿ ಕಸಾಪ ತಾಲೂಕು ಘಟಕದ ಈ ಕಾರ್ಯ ನಿಜಕ್ಕೂ ಮಾದರಿಯಾಗಿದೆ. | ಪೂರ್ಣಿಮಾ. ಸಹಾಯಕ ನಿರ್ದೇಶಕಿ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ

Kasapa-7
Kasapa-10

ಓದುವ ಹವ್ಯಾಸ ಇತ್ತೀಚೆಗೆ ನಶಿಸಿಹೋಗಿದೆ. ಎಲ್ಲರೂ ಮೊಬೈಲ್​ನಲ್ಲಿ ಮುಳುಗಿದ್ದಾರೆ. ಮನೆಯಲ್ಲಿರುವ ಮಕ್ಕಳು ಕನ್ನಡ ಪುಸ್ತಕ ಓದುವಂತಾಗಬೇಕು. ಅಷ್ಟೇಅಲ್ಲ, ಮನೆಗೆ ಬರುವ ಅತಿಥಿಗಳಿಗೂ ಸಹ ಪುಸ್ತಕ ಓದಲು ಸಿಗಬೇಕು ಎಂಬ ಉದ್ದೇಶದಿಂದ 'ಮನೆಯೇ ಗ್ರಂಥಾಲಯ' ಆರಂಭಿಸಿದ್ದೇವೆ. ಅಭಿಯಾನಕ್ಕೆ ಉಡುಪಿ ತಾಲೂಕು ಘಟಕದ ಎಲ್ಲ ಪದಾಧಿಕಾರಿಗಳು, ಸದಸ್ಯರು ಸಹಕರಿಸಿ ಕೈಜೋಡಿಸಿದ್ದಾರೆ. ಜನರಿಂದಲೂ ಉತ್ತಮ ಸ್ಪಂದನೆಯಿದೆ. ಇದು ಕನ್ನಡದ ಭಾಷೆಗಾಗಿ, ತಾಯಿ ಭುವನೇಶ್ವರಿಗಾಗಿ ನಮ್ಮ ಅಳಿಲು ಸೇವೆ. | ರವಿರಾಜ್​ ಎಚ್​.ಪಿ. ಅಧ್ಯಕ್ಷ, ಕಸಾಪ ಉಡುಪಿ ತಾಲೂಕು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net