ಭಜನೆಯಿಂದ ಭಗವಂತನ ಸಾಕ್ಷಾತ್ಕಾರ ಸಾಧ್ಯ...

Bhajana
Published on

ರಾಜೇಂದ್ರ ಕುಮಾರ್​ ಬಸ್ರೂರು ಅನಿಸಿಕೆ

ಶ್ರೀ.ಧ.ಮಂ.ಭ.ಪರಿಷತ್​ ಸಭೆ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಏಕಾಗ್ರತೆ, ಮಾನಸಿಕ ದೃಢತೆ ಹಾಗೂ ಆತ್ಮವಿಶ್ವಾಸದ ವೃದ್ಧಿಯೊಂದಿಗೆ ಭಗವಂತನ ಸಾಕ್ಷಾತ್ಕಾರ ಮಾಡಿಕೊಳ್ಳಲು ಭಜನೆ ಸುಲಭ ಮಾರ್ಗವಾಗಿದೆ. ಯುವ ಸಮುದಾಯವೂ ಭಜನೆಯತ್ತ ಆಕರ್ಷಿತರಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ತಾಲೂಕಿನ ಎಲ್ಲ ವಲಯಗಳಲ್ಲಿ ಸಭೆ ನಡೆಸಿ ಭಜನಾ ಮಂಡಳಿಗಳನ್ನು ಸಂಘಟಿಸಿ ಬೆಳೆಸಬೇಕು ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್​ನ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಕುಮಾರ್​ ಬಸ್ರೂರು ಸಲಹೆ ನೀಡಿದರು.

ಉಡುಪಿಯ ಶ್ರೀ ಕ್ಷೇ.ಧ. ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಸೌಧದಲ್ಲಿ ಭಜನಾ ಪರಿಷತ್​ ತಾಲೂಕು ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ ಅಧ್ಯಕ್ಷತೆಯಲ್ಲಿ ಫೆ.21ರ ಸಂಜೆ ಆಯೋಜಿಸಿದ್ದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್​ ಉಡುಪಿ ತಾಲೂಕು ಸಮಿತಿಯ ಸಭೆ ಉದ್ಘಾಟಿಸಿ ಮಾತನಾಡಿದರು.

ಭಜನಾ ತರಬೇತಿ

ಭಜನಾ ತರಬೇತುದಾರೆ ವಿದುಷಿ ಉಷಾ ಹೆಬ್ಬಾರ್​ ಮಾತನಾಡಿ, ಮುಂದೆ ನಡೆಯಲಿರುವ ವಿಶೇಷ ಕಾರ್ಯಕ್ರಮದ ಪ್ರಯುಕ್ತ ವಲಯಗಳ ಮಟ್ಟದಲ್ಲಿ ಭಜನಾ ತರಬೇತಿ ನಡೆಯಲಿದೆ. ಭಜಕರು ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಭಜನಾ ಪರಿಷತ್​ನ ಪ್ರಧಾನ ಕಾರ್ಯದರ್ಶಿ ಶಿವಕುಮಾರ್​ ಅಂಬಲಪಾಡಿ ಮಾತನಾಡಿ, ಮುಂದೆ ನಡೆಯಲಿರುವ ವಲಯ ಮಟ್ಟದ ಸಭೆ ಹಾಗೂ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.

ಶ್ರೀ ಕ್ಷೇ.ಧ. ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ತಾಲೂಕು ಯೋಜನಾಧಿಕಾರಿ ರಾಮ ಎಂ. ಹಾಗೂ ಭಜನಾ ಪರಿಷತ್​ ವಲಯಗಳ ಸಂಯೋಜಕರು ಉಪಸ್ಥಿತರಿದ್ದರು.

ಭಜನಾ ಪರಿಷತ್​ನ ಜಿಲ್ಲಾ ಸಮನ್ವಯಾಧಿಕಾರಿ ರಾಘವೇಂದ್ರ ಮುದ್ರಾಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಿಷತ್​ನ ಕೋಶಾಧಿಕಾರಿ ಪೂರ್ಣಿಮಾ ಪೆರ್ಡೂರು ವಂದಿಸಿದರು.

ಉಡುಪಿ ತಾಲೂಕು ಭಜನಾ ಪರಿಷತ್​ ವತಿಯಿಂದ ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಇತ್ತೀಚೆಗೆ ವಿಜಯದಾಸರು ಹಾಗೂ ಪುರಂದರದಾಸರ ಆರಾಧನೆ, ಸಪ್ತೋತ್ಸವದ ನಿಮಿತ್ತ ಎರಡು ಬಾರಿ ನಡೆದ ಸಹಸ್ರ ಕಂಠ ಗಾಯನ, ರಥಬೀದಿಯಲ್ಲಿ ನಡೆದ ವಿಶೇಷ ಕುಣಿತ ಭಜನೋತ್ಸವ ಕಾರ್ಯಕ್ರಮ ಅಪಾರ ಜನಮೆಚ್ಚುಗೆ, ಮನ್ನಣೆ ಪಡೆದಿದೆ. | ಶಿವಕುಮಾರ ಅಂಬಲಪಾಡಿ. ಭಜನಾ ಪರಿಷತ್​ನ ಪ್ರ.ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net