

ಉಡುಪಿ: ಉಡುಪಿ ತಾಲೂಕು ಪಂಚಾಯಿತಿ ನೂತನ ಅಧ್ಯಕ್ಷೆಯಾಗಿ ಸಂಧ್ಯಾ ಕಾಮತ್ ಹಾಗೂ ಉಪಾಧ್ಯಕ್ಷರಾಗಿ ಶರತ್ ಕುಮಾರ್ ಬೈಲಕೆರೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗುರುವಾರ ತಾಪಂ ಸಭಾಂಗಣದಲ್ಲಿ ಚುನಾವಣಾಧಿಕಾರಿಯಾಗಿ ಕುಂದಾಪುರ ಸಹಾಯಕ ಕಮಿಷನರ್ ರಾಜು ಚುನಾವಣೆ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ತಾಪಂ. ಕಾರ್ಯನಿರ್ವಾಹಕ ಅಧಿಕಾರಿ ಮೋಹನ್ ರಾಜ್ ಉಪಸ್ಥಿತರಿದ್ದರು.
9 ತಿಂಗಳು ಅಧಿಕಾರ: ಕಾಪು ಮತ್ತು ಬ್ರಹ್ಮಾವರದಲ್ಲಿ ಹೊಸ ತಾಲೂಕು ಪಂಚಾಯಿತಿ ಅಸ್ತಿತ್ವಕ್ಕೆ ಬಂದ ಬಳಿಕ ಉಡುಪಿ ತಾಪಂ ಸದಸ್ಯರ ಸಂಖ್ಯೆ 41ರಿಂದ 13ಕ್ಕೆ ಇಳಿಕೆಯಾಗಿದೆ. ಮೀಸಲಾತಿ ಪ್ರಕಾರ ಅಧ್ಯಕ್ಷ ಸ್ಥಾನ ಸಾಮಾನ್ಯ(ಮಹಿಳೆ), ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಅಂಜಾರು-ಆತ್ರಾಡಿ ಕ್ಷೇತ್ರದ ಸದಸ್ಯೆ ಸಂಧ್ಯಾ ಕಾಮತ್ ಅಧ್ಯಕ್ಷೆಯಾಗಿದ್ದಾರೆ. ಈ ಹಿಂದೆ ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿ ಅಧ್ಯಕ್ಷರಾಗಿದ್ದ ತೆಂಕನಿಡಿಯೂರು ಕ್ಷೇತ್ರದ ಶರತ್ ಬೈಲಕೆರೆ ಉಪಾಧ್ಯಕ್ಷರಾಗಿದ್ದಾರೆ. ಇವರ ಅಧಿಕಾರ ಅವಧಿ 9 ತಿಂಗಳು ಇದೆ.