

ಉಡುಪಿ : ಕಥೆಗಳಿಂದ ಮನುಷ್ಯನ ಅಂತರಂಗ ತಿಳಿಯುತ್ತದೆ. ಕಥೆಗಾರರಿಗೆ ಮತ್ತು ಕವಿಗಳಿಗೆ ಜಗತ್ತು ಹೆದರುತ್ತದೆ. ಅವರು ಸಮಾಜದ ದಾರ್ಶನಿಕರು ಎಂದು ಸಾಹಿತಿ ಜೋಗಿ ಹೇಳಿದರು.
ಶನಿವಾರ ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ವತಿಯಿಂದ ಆಯ್ದ ಸುಮಾರು 117ಕನ್ನಡ ಕತೆಗಾರರ ವಿವಿಧ ಕತೆಗಳ ಬೃಹತ್ ಕೃತಿ 'ನೂರಾರು ಲೇಖಕರ ನೂರಾರು ಕತೆಗಳು' ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಈ ಕೃತಿಯಲ್ಲಿ ಎಲ್ಲ ಬಗೆಯ ಕಥೆಗಳು ವೈಶಿಷ್ಟ್ಯತೆಯಿಂದ ಕೂಡಿವೆ. ಒಳ್ಳೆಯ ಕಥೆ ರೂಪುಗೊಳ್ಳಲು ಹೆಚ್ಚು ಓದಬೇಕು ಎಂದರು.
ಪತ್ರಕರ್ತ ವಸಂತ ಗಿಳಿಯಾರು ಪುಸ್ತಕದ ಕುರಿತು ಮಾತನಾಡಿದರು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ್ ಶೆಣೈ ಅಧ್ಯಕ್ಷತೆಯನ್ನು ವಹಿಸಿದ್ದರು.
ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಶಂಕರ್, ಸಂಚಾಲಕ ರವಿರಾಜ್ ಎಚ್. ಪಿ ಉಪಸ್ಥಿತರಿದ್ದರು.
ಲೇಖಕರಾದ ರಾಜೇಶ್ ಭಟ್ ಪಣಿಯಾಡಿ ಸ್ವಾಗತಿಸಿ, ಮರವಂತೆ ನಾಗರಾಜ್ ಹೆಬ್ಬಾರ್ ಪ್ರಸ್ತಾವನೆ ಗೈದರು. ಪೂರ್ಣಿಮಾ ಜನಾರ್ದನ್ ನಿರೂಪಿಸಿದರು.