ಉಡುಪಿ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಜ. 18ರಿಂದ

h29-Koti Geeta 2
Published on

ಹುಬ್ಬಳ್ಳಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ನಾಲ್ಕನೇ ಬಾರಿ ಪರ್ಯಾಯ ನಡೆಸುವ ಅವಕಾಶ ನನಗೆ ಲಭಿಸಿದೆ. ಜ. 18ರಿಂದ ಪರ್ಯಾಯ ಸಂಕಲ್ಪ ನೆರವೇರಲಿದೆ ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್, ಅಬುದಾಬಿ, ಶಾರ್ಜಾ ಸೇರಿದಂತೆ ವಿದೇಶದಲ್ಲಿ ಸಂಚರಿಸಿ ಶ್ರೀಕೃಷ್ಣನ ಭಕ್ತರನ್ನು ಆಹ್ವಾನಿಸಿದ್ದೇವೆ. 6 ತಿಂಗಳವರೆಗೆ ಭಾರತ ಪರಿಕ್ರಮ, 2 ತಿಂಗಳು ಕರ್ನಾಟಕದಾದ್ಯಂತ ಸಂಚರಿಸಿ ಭಕ್ತರನ್ನು ಆಹ್ವಾನಿಸಿದ್ದೇವೆ. ಪ್ರತಿ 2 ವರ್ಷಕ್ಕೊಮ್ಮೆ ಪರ್ಯಾಯ ನಡೆಯುತ್ತದೆ ಎಂದರು.
ಪರ್ಯಾಯ ನಿಮಿತ್ತ ಒಂದು ಕೋಟಿ ಜನರಿಂದ ಭಗವದ್ಗೀತೆ ಶ್ಲೋಕ ಬರೆಯಿಸಿ ಸಮರ್ಪಣೆ ಮಾಡಲಾಗುತ್ತಿದೆ. ಅಂದರೆ ‘ಕೋಟಿ ಗೀತಾ ಲೇಖನ ಯಜ್ಞ’. ಈಗಾಗಲೇ ಲಕ್ಷಾಂತರ ಭಕ್ತರು ಬರೆಯಲಾರಂಭಿಸಿದ್ದಾರೆ. ಅವುಗಳನ್ನು ಶ್ರೀಮಠಕ್ಕೆ ಸಮರ್ಪಣೆ ಮಾಡಿಸಿಕೊಂಡು ಮರಳಿಸಲಾಗುವುದು. ನಂತರ ಅವರು ತಮ್ಮ ಮನೆಯ ಜಗುಲಿಯಮೇಲಿಟ್ಟು ಪೂಜೆ ಮಾಡಬೇಕು ಎಂದರು.
ಭಗವದ್ಗೀರೆ ಬರೆಯುವವರು ಎರಡು ಸಂಕಲ್ಪ ಮಾಡಬೇಕು. ಯಾವುದೇ ದುಶ್ಚಟಗಳಿಂದ ದೂರವಿರಬೇಕು. ತಾವು ಶ್ಲೋಕ ಬರೆಯುವುದಲ್ಲದೇ ಬೇರೆಯವರೂ ಬರೆಯಲು ತಿಳಿಸಬೇಕು. ಬರೆಯವವರಿಗೆ ಶ್ರೀಮಠದಿಂದ ಭಗವದ್ಗೀತೆ ಶ್ಲೋಕವುಳ್ಳ ಪುಸ್ತಕ, ಕಾಪಿ ಹಾಗೂ ದೀಕ್ಷಾ ಸೂತ್ರ ನೀಡಲಾಗುತ್ತಿದೆ ಎಂದರು.
ಪಠ್ಯಗಳಲ್ಲಿ ಭಗವದ್ಗೀತೆ ಅಳವಡಿಸಲಿ: ಭಗವದ್ಗೀತೆ ಮತೀಯ ಗ್ರಂಥವಲ್ಲ, ಸನ್ಮತಿ ಗ್ರಂಥ. ಹಾಗಾಗಿ ಗೀತಾ ಜಯಂತಿ ನಿಮಿತ್ತ ಸರ್ಕಾರಿ ರಜೆ ನೀಡಬೇಕು. ಪಠ್ಯಗಳಲ್ಲಿ ಭಗವದ್ಗೀತೆ ಅಳವಡಿಸಬೇಕೆಂದು 2025ರ ಡಿಸೆಂಬರ್ ತಿಂಗಳು ವೇಳೆ ರಾಜ್ಯ ಸರ್ಕಾರಕ್ಕೆ ಒತ್ತಡ ಹಾಕಲಾಗುವುದು. ಪರ್ಯಾಯ ಕೊನೆಯ ದಿನದಂದು ದೇಶ-ವಿದೇಶದಿಂದ ವಿದ್ವಾಂಸರು ಬರಲಿದ್ದಾರೆ. ಅಂದು ಯಾರೇ ಪ್ರಧಾನಿ ಇರಲಿ ಅವರನ್ನು ಆಹ್ವಾನಿಸಲಾಗುವುದು. ಆದರೆ, ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕೆಂದು ಶ್ರೀಕೃಷ್ಣ ಹಾಗೂ ಜನರ ಸಂಕಲ್ಪ ಇದೆ. ಹಾಗಾಗಿ ಅವರೇ ಪ್ರಧಾನಿ ಆಗಲಿದ್ದಾರೆ. ಅವರು ಇರದೇ ಇದ್ದರೂ ಅವರನ್ನೂ ಸಹ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತೇವೆ ಎಂದು ಶ್ರೀಗಳು ವಿವರಿಸಿದರು.
ಚರ್ಚ್ ಸ್ಥಳದಲ್ಲಿ ಶ್ರೀಕೃಷ್ಣ ವೃಂದಾವನ: ವಿದೇಶದಲ್ಲಿ ಈಗಾಗಲೇ 15 ಚರ್ಚ್‌ಗಳನ್ನು ಖರೀದಿ ಮಾಡಿ ಶ್ರೀಕೃಷ್ಣನ ದೇವಸ್ಥಾನ ನಿರ್ಮಿಸಲಾಗಿದೆ. ಅದಕ್ಕೆ ಶ್ರೀಕೃಷ್ಣ ವೃಂದಾವನ ಎಂದು ಹೆಸರಿಡಲಾಗಿದೆ. ಒಟ್ಟು 108 ಚರ್ಚ್‌ಗಳನ್ನು ಖರೀದಿ ಮಾಡುವ ಸಂಕಲ್ಪ ಇದೆ. ಅಲ್ಲಿ ಶ್ರೀಕೃಷ್ಣ ಮಂದಿರಗಳು ತಲೆ ಎತ್ತಲಿವೆ. ನಾನು ಸನ್ಯಾಸ ಸ್ವೀಕರಿಸಿ 50 ವರ್ಷ ಆಗಲಿದೆ. ಇದರ ನಿಮಿತ್ತ ಮುಂದಿನ ವರ್ಷ ಸುವರ್ಣ ರಥ ಸಮರ್ಪಣೆ ಕಾರ್ಯಕ್ರಮ ಜರುಗಲಿದೆ ಎಂದು ಪುತ್ರಿಗೆ ಶ್ರೀಗಳು ತಿಳಿಸಿದರು.

ಮೆರವಣಿಗೆ: ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರ ಮೆರವಣಿಗೆ ನಗರದಲ್ಲಿ ಅದ್ದೂರಿಯಾಗಿ ನಡೆಯಿತು. ನಂತರ ‘ಕೋಟಿ ಗೀತಾ ಲೇಖನ ಯಜ್ಞ’ ಕಾರ್ಯಕ್ರಮವನ್ನು ಶ್ರೀಗಳು ಉದ್ಘಾಟಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net