

ಉಡುಪಿ: ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಯಲ್ಲಿ 21 ಅಪಘಾತವಲಯಗಳನ್ನು ಗುರುತಿಸಲಾಗಿದ್ದು, ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ಕೆ. ಅರುಣ್ ಹೇಳಿದರು.
ಪತ್ರಿಕಾ ಭವನದಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಗರದಲ್ಲಿ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಂಚಾರ ನಿಯಂತ್ರಣಕ್ಕೆ ಡಿ.15ರ ಬಳಿಕ ಹೆಚ್ಚುವರಿ ಸಿಬ್ಬಂದಿ ನೇಮಿಸಲಾಗುವುದು. ಪರ್ಯಾಯೋತ್ಸವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ 16 ಕಡೆಗಳಲ್ಲಿ ಬಾಡಿಗೆ ಆಧಾರದಲ್ಲಿ ಕೂಡಲೇ ಉತ್ತಮ ಗುಣಮಟ್ಟದ ಸಿಸಿ ಕೆಮರಾಗಳನ್ನು ಅಳವಡಿಸುವಂತೆ ನಗರಸಭೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. 2&3 ತಿಂಗಳ ನಂತರ ಶಾಶ್ವತ ಕೆಮರಾಗಳನ್ನು ಹಾಕಲಾಗುವುದು ಎಂದು ಹೇಳಿದರು.
ಗಾಂಜಾ ನಿಯಂತ್ರಣಕ್ಕೆ ಕ್ರಮ
ಗಾಂಜಾ ನಿಯಂತ್ರಣಕ್ಕೆ ಎಲ್ಲಾ ಕ್ರಮಕೈಗೊಳ್ಳಲಾಗುತ್ತಿದ್ದು, ಶಾಲಾ, ಕಾಲೇಜು ಆವರಣಗಳಲ್ಲಿ ಮಕ್ಕಳು ನಿರಂತರವಾಗಿ ನಿರ್ದಷ್ಟ ಚಾಕಲೇಟ್ ಖರೀದಿ ಮಾಡುತ್ತಿರುವ ಬಗ್ಗೆ ಗಮನಕ್ಕೆ ಬಂದರೆ ಇಲಾಖೆಗೆ ಮಾಹಿತಿ ನೀಡುವಂತೆ ಪ್ರಾಂಶುಪಾಲರು ಮತ್ತು ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ಪ್ರತಿ ತಿಂಗಳು 50 ಕಡೆಗಳಲ್ಲಿ ರ್ಯಾಂಡಮ್ ಟೆಸ್ಟ್ ನಡೆಸುವಂತೆ ಆಹಾರ ನಿಯಂತ್ರಣಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ಬೆಟ್ಟಿಂಗ್ ಆಪ್ ಮಾಹಿತಿ ನೀಡಿ
ಆ್ಯಪ್ ಗಳ ಮೂಲಕ ಬೆಟ್ಟಿಂಗ್ ಮತ್ತು ಮಟ್ಕಾ ದಂಧೆ ನಡೆಯುತ್ತಿರುವ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ಲಭಿಸಿದ್ದು, ಸಾರ್ವಜನಿಕರು ಈ ಬಗ್ಗೆ ರ್ನಿದಿಷ್ಟ ದೂರು ಸಲ್ಲಿಸಿದರೆ ಕೂಡಲೇ ಕ್ರಮಕೈಗೊಳ್ಳಲಾಗುವುದು. ಕಳೆದ 3 ರ್ವಷಗಳಲ್ಲಿ 2300 ಸೈಬರ್ ಕೆಂ ಪ್ರಕರಣ ದಾಖಲಾಗಿದ್ದು, ಹಣ ಕಳೆದುಕೊಟ್ಟ ತಕ್ಷಣ ಸಂತ್ರಸ್ತರು 1 ಗಂಟೆಯೊಳಗೆ 1930 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದರೆ ಹಣವನ್ನು ಹಿಂಪಡೆಯಬಹುದು. ಕಳೆದ 3 ವರ್ಷದಲ್ಲಿ ನೈತಿಕ ಪೊಲೀಸ್ ಗಿರಿ ನಡೆಸಿದವರ ಮಾಹಿತಿ ಸಂಗ್ರಹಿಸಿ ಎಲ್ಲರಿಗೂ ನೋಟಿಸ್ ನೀಡಿ ಮುಚ್ಚಳಿಕೆ ಬರೆದುಕೊಳ್ಳಲಾಗಿದೆ ಎಂದರು.