

ಉಡುಪಿ: ಭಗವಂತನನ್ನು ತಿಳಿಸುವ ಭಾಷೆ ಸಂಸ್ಕೃತ ಎಂದಿಗೂ ಬದಲಾವಣೆಯಾಗದೇ ಎಲ್ಲಾ ಭಾಷೆಗಳ ತಾಯಿಯೆಂದೆನಿಸಿದೆ. ಭಗವಂತನಿಗೂ ಸಂಸ್ಕೃತಕ್ಕೂ ಬಿಂಬ ಮತ್ತು ಪ್ರತಿಬಿಂಬ ಭಾವವಿದೆ ಎಂಬುವುದನ್ನು ಋಗ್ವೇದ ಪ್ರತಿಪಾದಿಸುತ್ತಿದೆ. ಪ್ರತಿಯೊಂದು ಭಾಷೆಯಿಂದಲೂ ಭಗವಂತನನ್ನು ಸ್ತುತಿಸಬಹುದು. ಆದರೆ ಸಂಸ್ಕೃತದಲ್ಲಿ ಮಾಡಿದ ಪ್ರಾರ್ಥನೆ ಎಲ್ಲಾ ವಿಧದ ಪ್ರಾರ್ಥನೆಗಳನ್ನೊಳಗೊಂಡಿದೆ ಎಂದು ಪರ್ಯಾಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಹೇಳಿದರು.
ಬುಧವಾರ ಕೃಷ್ಣಮಠದ ರಾಜಾಂಗಣದಲ್ಲಿ ಎಸ್.ಎಂ.ಎಸ್.ಪಿ. ಸಂಸ್ಕೃತ ಕಾಲೇಜಿನ 118ನೇ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಆಶೀರ್ವದಿಸಿದರು. ಮಧ್ವಾಚಾರ್ಯರ ಗುರುಗಳಾದ ಅಚ್ಯುತಪ್ರಜ್ಞಾಚಾರ್ಯರು 800 ವರ್ಷದ ಹಿಂದೆಯೇ ಉಡುಪಿಯಲ್ಲಿ ತತ್ತ್ವವಾದದ ಶಾಲೆಯನ್ನು ಆರಂಭಿಸಿದ್ದರು. ಅದನ್ನೇ ಮಧ್ವಸಿದ್ಧಾಂತಪ್ರಬೋಧಿನೀ ಸಂಸ್ಕೃತ ಪಾಠಶಾಲೆ ಮುಂದುವರಿಸಿದೆ ಎಂದು ಹೇಳಿದರು.
ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠ ಡಾ. ತಿರುಮಲ ಕುಲಕರ್ಣಿ ಮಾತನಾಡಿ, ಸಂಸ್ಕಾರಕ್ಕೂ-ಸಂಸ್ಕೃತಕ್ಕೂ ಅವಿನಾಭಾವ ನಂಟಿದೆ. ನೂತನ ಶಿಕ್ಷಣನೀತಿ ಪ್ರಕಾರ ವಿದ್ಯಾರ್ಥಿಗಳಿಗೆ ಬೇಕಾದದ್ದನ್ನು ಕಲಿಕಾ ನೀತಿಯಲ್ಲಿ ಕಲಿಯಬಹುದು. ಜತೆಗೆ ಕೌಶಲ್ಯವನ್ನು ಅಭಿವೃದ್ಧಿಪಡಿಸುವುದರಲ್ಲಿ ಬಳಸಿಕೊಳ್ಳಬಹುದು. ಸಂಸ್ಕೃತವನ್ನು ವಿದೇಶಗಳಲ್ಲಿ ಕಂಪ್ಯೂಟರ್ ಬಳಕೆ ಸಂಬಂಧಪಟ್ಟು ಹೆಚ್ಚು ಹೆಚ್ಚು ಬಳಸಿಕೊಂಡಿದ್ದಾರೆ. ನಮ್ಮಲ್ಲಿಯೂ ಆ ಪ್ರವೃತ್ತಿಯು ಬೆಳೆಯಬೇಕು ಎಂದರು.
ನಿವೃತ್ತ ಸಂಸ್ಕೃತ ಅಧ್ಯಾಪಕ ಶ್ರೀನಿವಾಸ ಆಚಾರ್ಯ, ಸಂಸ್ಕೃತ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಪುಷ್ಪಲತಾ, ಕಾಲೇಜಿನ ಹಳೆ ವಿದ್ಯಾರ್ಥಿ ಹೆರ್ಗ ಹರಿಪ್ರಸಾದ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಉಷಾ ಚಡಗ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ ಅವರನ್ನು ಗೌರವಿಸಲಾಯಿತು. ಎಸ್.ಎಂ.ಎಸ್.ಪಿ. ಸಭೆಯ ಕಾರ್ಯದರ್ಶಿ ಗೋಪಾಲಜೋಯಿಸರು ಸ್ವಾಗತಿಸಿದರು. ಎಸ್.ಎಂ.ಎಸ್.ಪಿ. ಸಭೆಯ ಕೋಶಾಧಿಕಾರಿ ಚಂದ್ರಶೇಖರ ಆಚಾರ್ಯ, ಕಾಲೇಜಿನ ಪ್ರಾಂಶುಪಾಲ ಸತ್ಯನಾರಾಯಣಾಚಾರ್ಯ ವರದಿ ವಾಚಿಸಿದರು. ವೇದಾಂತ ವಿದ್ಯಾರ್ಥಿಗಳಾದ ಸುಬ್ರಹ್ಮಣ್ಯ ಮತ್ತು ತಂಡ ವೇದಘೋಷ ನಡೆಸಿದರು. ನಿಖಿತಾ ಮತ್ತು ತಂಡ ಪ್ರಾರ್ಥಿಸಿದರು.ಡಾ. ಷಣ್ಮುಖ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು. ಡಾ ಶಿವಪ್ರಸಾದ ತಂತ್ರಿ ವಂದಿಸಿದರು.