

ಉಡುಪಿ: ಐಟಿ ಉದ್ಯಮ ಮಂಗಳೂರು ಆಯ್ಕೆ ಮಾಡಿಕೊಳ್ಳಲು ಮುಖ್ಯ ಕಾರಣ ವಿಮಾನ ನಿಲ್ದಾಣ. ಹೀಗಾಗಿ ಉಡಾನ್ ಯೋಜನೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾದರೆ ಅನೇಕ ಸಾಫ್ಟ್‌ವೇರ್ ಕಂಪನಿಗಳು ಪ್ರಾರಂಭಗೊಂಡು ಸ್ಥಳೀಯ ಯುವಜನತೆಗೆ ಹೆಚ್ಚಿನ ಉದ್ಯೋಗ ದೊರೆಯಲಿದೆ ಎಂದು ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.
ಮಂಗಳವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಶ್ರಯದಲ್ಲಿ ಉಡುಪಿ ಜಿಲ್ಲಾ ರಜತ ಮಹೋತ್ಸವದ ಪ್ರಯುಕ್ತ ಜಿಲ್ಲಾ ಪ್ರಥಮ ಉಸ್ತುವಾರಿ ಸಚಿವರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಮಾನ ನಿಲ್ದಾಣದಿಂದ ಪ್ರವಾಸೋದ್ಯಮಕ್ಕೂ ಅನುಕೂಲವಾಗಲಿದೆ. ಕರಾವಳಿಯಲ್ಲಿ ಟೆಂಪಲ್ ಮತ್ತು ಮೆಡಿಕಲ್ ಟೂರಿಸಂ ಬೆಳೆದಿದೆ. ಮೆಡಿಕಲ್ ಕಾಲೇಜು ಪ್ರಾರಂಭವಾದರೆ ಜನರಿಗೆ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಸೌಲಭ್ಯ ದೊರೆಯಲಿದೆ ಎಂದು ಹೇಳಿದರು.
ಸರ್ಕಾರ ಜನರಿಗೆ ನಿಕಟ
ಜಿಲ್ಲೆ ರಚನೆ ಸಂದರ್ಭದಲ್ಲಿ ವಿಸ್ತೀರ್ಣ ಚಿಕ್ಕದಾಯಿತು ಎಂಬ ಚರ್ಚೆ ನಡೆದಿತ್ತು. ಆದರೆ ಅಂದಿನ ಕಾಲದಲ್ಲಿ ಬೈಂದೂರು-ಜಡ್ಕಲ್ ಮೊದಲಾದ ಗಡಿಪ್ರದೇಶಗಳಿಂದ ಜನರು ತಮ್ಮ ಕೆಲಸ ಮಾಡಿಕೊಳ್ಳಲು ಮಂಗಳೂರಿಗೆ ತೆರಳಬೇಕಿತ್ತು. ಒಂದಿನ ಅಲ್ಲೇ ಉಳಿದುಕೊಳ್ಳುವ ಅನಿವಾರ್ಯತೆ ಇತ್ತು. ಸಚಿವನಾಗಿದ್ದ ನನಗೆ ಸರ್ಕಾರಿ ಸೌಲಭ್ಯ ಬಳಸಿಕೊಂಡು ಓಡಾಡುವುದು ಕಷ್ಟವಾಗಿದ್ದ ದಿನಗಳಲ್ಲಿ ಜನರ ಬವಣೆ ಅರ್ಥವಾಗುತ್ತಿತ್ತು. ಹೀಗಾಗಿ ಪ್ರತ್ಯೇಕ ಜಿಲ್ಲೆಗೆ ಬೇಡಿಕೆ ಇಟ್ಟಿದ್ದೆ. ಇದಕ್ಕೆ ಆಗಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಪೂರಕವಾಗಿ ಸ್ಪಂದಿಸಿದ್ದರು. ಉಡುಪಿ ಜಿಲ್ಲೆಯಾಗದಿದ್ದರೆ ತಾಲೂಕು ಕೇಂದ್ರವಾಗಿಯೇ ಉಳಿಯುತ್ತಿದ್ದು, ಹೆಚ್ಚಿನ ಅನುದಾನಗಳು ಲಭ್ಯವಾಗುತ್ತಿರಲಿಲ್ಲ. ಜನರ ಹತ್ತಿರ ಸರ್ಕಾರ ಬರಬೇಕು ಎಂಬುದು ನಮ್ಮ ಮುಖ್ಯ ಉದ್ದೇಶವಾಗಿತ್ತು. ಅದು ಈಡೇರಿದೆ ಎಂದು ಜಯಪ್ರಕಾಶ್ ಹೆಗ್ಡೆ ತಿಳಿಸಿದರು.
ವರ್ಚುವಲ್ ಮೂಲಕ ಸಂದೇಶ ನೀಡಿದ ಪ್ರಥಮ ಜಿಲ್ಲಾಧಿಕಾರಿ ಡಾ.ಕಲ್ಪನಾ ಗೋಪಾಲನ್, ಉಡುಪಿ ಜಿಲ್ಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿದೆ. ಹೊಸ ಜಿಲ್ಲೆ ಸೃಷ್ಟಿಸುವ ಭಾಗ್ಯ ನಮಗೆ ಲಭಿಸಿತ್ತು ಎಂದು ಹೇಳಿದರು. ಸಂಘ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು, ಪ್ರ.ಕಾ. ನಝೀರ್ ಪೊಲ್ಯ , ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ಉಪಸ್ಥಿತರಿದ್ದರು.
ಹಿರಿಯ ಪತ್ರಕರ್ತರಿಗೆ ಗೌರವ
ಜಿಲ್ಲೆ ರಚನೆ ಸಂದರ್ಭದಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಸಂಜೀವ ಕುಂದರ್ (ಪಿಟಿಐ), ದಿನೇಶ್ ಕಿಣಿ(ಕನ್ನಡ ಜನ ಅಂತರಂಗ), ಆರೀಫ್ ಪಡುಬಿದ್ರಿ(ಕರಾವಳಿ ಅಲೆ), ರಾಮಕೃಷ್ಣ ಮೂರ್ತಿ (ಪ್ರಜಾವಾಣಿ), ಈಶ್ವರ ಭಟ್ (ಹೊಸದಿಂಗತ), ಆಸ್ಟ್ರೋ ಮೋಹನ್ (ಉದಯ ವಾಣಿ), ಚಂದ್ರಶೇಖರ್ ಹೆಗ್ಡೆ ಗುಲ್ವಾಡಿ(ಜನವಾಹಿನಿ) , ದಿನಕರ ಬೆಂಗ್ರೆ (ಹೊಸಸಂಜೆ), ಬಾ.ನಾ.ಶಾಂತಪ್ರಿಯ (ಟೈಮ್ಸ್ ಆಫ್ ಇಂಡಿಯಾ), ಸವಿತಾ ಶಾಂತಪ್ರಿಯ (ಮಾರ್ನಿಂಗ್ ನ್ಯೂಸ್), ಜಯಪ್ರಕಾಶ್ ಕಿಣಿ ಹಾಗೂ ಗಣೇಶ್ ಕಲ್ಯಾಣಪುರ(ಪತ್ರಿಕಾ ಛಾಯಾಗ್ರಾಹಕ) ಅವರನ್ನು ಸನ್ಮಾನಿಸಲಾಯಿತು.