

ಉಡುಪಿ: ಅಜ್ಜರಕಾಡು ಕ್ರೀಡಾಂಗಣದಲ್ಲಿ ಆ.25ರಂದು ನಡೆಯುವ ರಜತಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ 97 ರಿಂದ ಈವರೆಗೆ ಸದಸ್ಯರಾಗಿ ಸೇವೆ ಸಲ್ಲಿಸಿದ ಜಿಲ್ಲೆಯ 155 ಗ್ರಾಪಂಗಳ ತಲಾ 50 ಮಂದಿ ಹಾಲಿ ಮತ್ತು ಮಾಜಿ ಸದಸ್ಯರು ಭಾಗವಹಿಸಲಿದ್ದಾರೆ. ಸದಸ್ಯರನ್ನು ಕರೆತರಲು ಎಲ್ಲಾ ಗ್ರಾಪಂಗಳಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಶಾಸಕ ಹಾಗೂ ರಜತ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಕೆ. ರಘುಪತಿ ಭಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಉಡುಪಿ ನಗರಸಭೆ, ಕಾಪು, ಕಾರ್ಕಳ, ಕುಂದಾಪುರ ಪುರಸಭೆ, ಸಾಲಿಗ್ರಾಮ ಪಟ್ಟಣಪಂಚಾಯಿತಿ ಎಲ್ಲಾ ವಾರ್ಡ್‌ಗಳ ಹಾಲಿ ಮತ್ತು ಮಾಜಿ ಸದಸ್ಯರು ಸೇರಿ ಒಟ್ಟು 8 ಸಾವಿರಕ್ಕೂ ಹೆಚ್ಚು ಜನಪ್ರತಿನಿಧಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಅಗ್ನಿಪಥ್ ದೌಡು
ಜಿಲ್ಲೆಯ ಯುವ ಜನತೆಯನ್ನು ಸೇನೆಗೆ ಸೇರಿಸಲು ಉತ್ತೇಜನ ನೀಡುವ ನಿಟ್ಟಿನಲ್ಲಿ ಅಗ್ನಿಪಥ್ ದೌಡು ಆಯೋಜಿಸಲಾಗಿದೆ. ಸುಮಾರು 500 ಮಂದಿ ಈಗಾಗಲೇ ನೋಂದಣಿ ಮಾಡಿಕೊಂಡಿದ್ದು, ಆ.24ರಂದು ಬೆಳಗ್ಗೆ 8 ಗಂಟೆಗೆ ಕಾರ್ಕಳದಲ್ಲಿ ಇಂಧನ ಸಚಿವ ಸುನೀಲ್ ಕುಮಾರ್ ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಲಿದ್ದಾರೆ. ನಿಟ್ಟೆ ಕಾಲೇಜು ಸಹಿತ 25 ಶಿಕ್ಷಣ ಸಂಸ್ಥೆಗಳಿಗೆ ತಂಡ ಭೇಟಿ ನೀಡಲಿದ್ದು, ಆ.25ರಂದು ಅಜ್ಜರಕಾಡು ಕ್ರೀಡಾಂಗಣದಲ್ಲಿ ಸಮಾಪನಗೊಳ್ಳಲಿದೆ ಎಂದರು.
15 ಸಾವಿರ ಮಂದಿ ಭಾಗಿ
ಆ.25ರಂದು 3ಗಂಟೆಗೆ ಬೋರ್ಡ್ ಹೈಸ್ಕೂಲ್‌ನಿಂದ ಅಜ್ಜರಕಾಡು ಕ್ರೀಡಾಂಗಣವರೆಗೆ ಶೋಭಾಯಾತ್ರೆ ಆಯೋಜಿಸಲಾಗಿದ್ದು, 5 ಸಾವಿರ ಕಾಲೇಜು ವಿದ್ಯಾರ್ಥಿಗಳು, 2 ಸಾವಿರ ಸ್ವಸಹಾಯ ಸಂಘಗಳ ಮಹಿಳೆಯರು ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ ಸುಮಾರು 15 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು, 1 ಕೋಟಿ ರೂ. ವೆಚ್ಚದ ಅಂದಾಜಿಸಲಾಗಿದೆ ಎಂದು ಮಾಹಿತಿ ನೀಡಿದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕಾಪು ಶಾಸಕ ಲಾಲಾಜಿ ಮೆಂಡನ್, ಮೈಸೂರು ಎಲೆಕ್ಟ್ರಿಕಲ್ ಲಿಮಿಟೆಡ್ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಜಿಲ್ಲಾಧಿಕಾರಿ ಕೂರ್ಮಾರಾವ್, ಜಿಪಂ ಸಿಇಒ ಪ್ರಸನ್ನ ಎಚ್., ಎಡಿಸಿ ವೀಣಾ, ಎಸಿ ರಾಜು, ಎಎಸ್‌ಪಿ ಸಿದ್ದಲಿಂಗಪ್ಪ, ಉಪಸ್ಥಿತರಿದ್ದರು.