

ಉಡುಪಿ: ಕೃಷ್ಣ ಮಠದಲ್ಲಿ ಜೂ.30ರಂದು ವಾರ್ಷಿಕ ಮಹಾಭಿಷೇಕ ಸಲುವಾಗಿ ಭಾನುವಾರ ‘ಉದ್ವಾರ್ಚನೆ’ (ಗರ್ಭಗುಡಿ ಶುಚಿತ್ವ) ಸೇವೆ ನಡೆಸಲಾಯಿತು.
ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಬೆಳಗ್ಗೆ ಪಂಚಾಮೃತ ಅಭಿಷೇಕದವರೆಗಿನ ಪೂಜೆ ನಡೆಸಿದ ಬಳಿಕ ಶುಚಿಗೊಳಿಸುವ ಕೆಲಸ ಆರಂಭಗೊಂಡಿತು. ಸುತ್ತಮುತ್ತ ಶುಚಿಗೊಳಿಸುತ್ತಿರುವಾಗ ನೀರು ವಿಗ್ರಹಕ್ಕೆ ಬೀಳದಂತೆ ಓಲಿ ಚಾಪೆಯನ್ನು ಮಡಚಿ ಕೃಷ್ಣನ ವಿಗ್ರಹದ ಸುತ್ತ ಇಡಲಾಗಿತ್ತು. ಬಳಿಕ ಓಲಿಯ ಕೊಡೆಯನ್ನು ಬೋರಲು ಹಾಕಲಾಯಿತು.
ಮಡಲಿನ ಕಡ್ಡಿಯಿಂದ ಮಾಡಿದ ಹೊಸ ಮೈಸೂಡಿಗಳಿಂದ ಸ್ವಾಮೀಜಿ ನೆಲ, ಮೇಲ್ಭಾಗಗಳ ಸ್ವಚ್ಛತಾ ಕಾರ್ಯ ಮಾಡಿದರು. ತಲೆ ಮೇಲೆ ಕಸ ಬೀಳದಂತೆ ಶ್ರೀಗಳು ಬಾಳೆ ಎಲೆಯ ಟೋಪಿ ಧರಿಸಿದ್ದರು. ಬೆಳಗ್ಗೆ 5ರಿಂದ 7.30ರ ವರೆಗೆ ಶುಚಿಗೊಳಿಸಲಾಯಿತು. ದೇವರಿಗೆ ಉಪಯೋಗಿಸುವ ಎಲ್ಲ ವಸ್ತು, ಆಭರಣಗಳನ್ನು ಶುಚಿಗೊಳಿಸಲಾಯಿತು.
ಕೃಷ್ಣಾಪುರ, ಅದಮಾರು ಹಿರಿಯ, ಪಲಿಮಾರು ಹಿರಿಯ - ಕಿರಿಯ, ಪೇಜಾವರ, ಸೋದೆ, ಕಾಣಿಯೂರು ಮಠಾಧೀಶರು ಕರಸೇವೆಯಲ್ಲಿ ತೊಡಗಿಸಿಕೊಂಡರು. ಕೃಷ್ಣ ಮಠದಲ್ಲಿ ಸೇವೆ ಮುಗಿಸಿ ಅದಮಾರು ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಮೂಲಮಠದಲ್ಲಿ ಉದ್ವಾರ್ಚನೆ ಸೇವೆ ನಡೆಸಿದರು.