ಗಲ್ಫ್ ರಾಷ್ಟ್ರಗಳಲ್ಲಿ ಸಂಕಷ್ಟಕ್ಕೀಡಾದವರಿಗೆ ನೆರವು

Gulf
Published on

ಉಡುಪಿ: ಗಲ್ಫ್ ರಾಷ್ಟ್ರಗಳಲ್ಲಿ ಮೂರು ತಿಂಗಳಿಂದ ಉದ್ಯೋಗ ಹಾಗೂ ಆದಾಯವಿಲ್ಲದೆ ಸಂಕಷ್ಟಕ್ಕೊಳಗಾದ ಜಿಲ್ಲೆಯ ಹಲವು ಮಂದಿ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಸಂಪರ್ಕಿಸಿ ಸಹಕಾರ ಯಾಚಿಸಿದ್ದಾರೆ. ಇವರಿಗೆ ನೆರವಾಗಲು ಪ್ರತಿಷ್ಠಾನ ಮುಂದಾಗಿದೆ.

ಬಹರೈನ್‌ನಲ್ಲಿರುವ ಪ್ರತಿಷ್ಠಾನದ ಕಾರ್ಯಕರ್ತ ನವೀನ್ ಪೂಜಾರಿ ನೇತೃತ್ವದಲ್ಲಿ ಸ್ವಯಂಸೇವಕರ ತಂಡ ತೊಂದರೆಗೊಳಪಟ್ಟವರ ಪಾಸ್‌ಪೋರ್ಟ್ ನಂಬರ್, ವಿಳಾಸ ಆಯಾ ದೇಶಗಳಲ್ಲಿ ಅವರ ವೀಸಾ ಹಾಗೂ ಎಂಪ್ಲಾಯ್‌ಮೆಂಟ್ ನಂಬರ್ ಇತ್ಯಾದಿ ವಿವರ ಸಂಗ್ರಹಿಸಿ ಉಡುಪಿಯಲ್ಲಿರುವ ಪ್ರತಿಷ್ಠಾನದ ಕಚೇರಿಗೆ ಕಳುಹಿಸಿದ್ದಾರೆ. ಅದನ್ನು ದುಬೈ, ರಿಯಾದ್, ಕತಾರ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಹಾಗೂ ದೆಹಲಿಯ ವಿದೇಶಾಂಗ ಸಚಿವಾಲಯಕ್ಕೆ ತಲುಪಿಸಲಾಗಿದೆ. ಶೀಘ್ರ ಎಲ್ಲರನ್ನು ಭಾರತಕ್ಕೆ ಕರೆ ತರಲಾಗುವುದು ಎಂದು ರಾಯಭಾರಿ ಕಚೇರಿ ಭರವಸೆ ನೀಡಿದೆ.

ವೆಬ್‌ಸೈಟ್‌ನಲ್ಲಿ ನೋಂದಣಿ: ಲಾಕ್‌ಡೌನ್ ಪರಿಣಾಮ ನೂರಾರು ಕಾರ್ಮಿಕರು ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗ ಕಳೆದುಕೊಂಡಿದ್ದು ಭಾರತಕ್ಕೆ ಬರಲು ಪ್ರಯತ್ನಿಸುತ್ತಿದ್ದಾರೆ. ಅವರೆಲ್ಲರೂ ಭಾರತೀಯ ದೂತವಾಸಗಳ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿದ್ದು, ಅವರ ಸರತಿಗಾಗಿ ಕಾಯುತ್ತಿದ್ದಾರೆ. ರಾಜ್ಯ ಸರ್ಕಾರದ ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ ಎಂದು ಎರಡು ತಿಂಗಳ ಹಿಂದೆ ವೈಬ್‌ಸೈಟ್‌ನಲ್ಲಿ ನೋಂದಾಯಿಸಿಕೊಂಡ ಕಾರ್ಕಳದ ಭಾಸ್ಕರ ಬಂಗೇರ, ಪಾದೂರಿನ ರಘುನಾಥ ಕುಂದರ್, ಬೆಳ್ವೆಯ ಪ್ರವೀಣ್ ಸುವರ್ಣ ಬೇಸರ ವ್ಯಕ್ತಪಡಿಸಿದ್ದಾರೆ. ಕತಾರ್‌ನಲ್ಲಿ ಕ್ಷೌರಿಕ ವೃತ್ತಿ ಮಾಡಿಕೊಂಡಿದ್ದ ಭಾಸ್ಕರ ಬಂಗೇರ ಮೂರು ತಿಂಗಳಿಂದ ಉದ್ಯೋಗವಿಲ್ಲದೆ ಉಳಿತಾಯದ ಹಣವೂ ಖಾಲಿಯಾಗಿದೆ. ಪ್ರಸಕ್ತ ಕುಟುಂಬದವರನ್ನು ಸಂಪರ್ಕಿಸಲೂ ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ನೆರವಿಗೆ ಸಮಿತಿ ರಚನೆ: ಅಸಹಾಯಕರ ನೆರವಿಗೆ ಧಾವಿಸಲು ಗಲ್ಫ್‌ನಲ್ಲಿರುವ ಮಾನವ ಹಕ್ಕು ಪ್ರತಿಷ್ಠಾನದ ಕಾರ್ಯಕರ್ತರು ಸೇರಿ ತುಳುನಾಡ ಗಲ್ಫ್ ಕಮಿಟಿ ರಚಿಸಿದ್ದಾರೆ. ಗುರುಪುರ ಮಳಲಿ ಮಟ್ಟಿಯ ನವೀನ್ ಪೂಜಾರಿ ನೇತೃತ್ವದಲ್ಲಿ ಕಾಜಿಲದ ರಾಜೇಶ್ ಸುವರ್ಣ, ಗಂಗೊಳ್ಳಿಯ ಮಹಮ್ಮದ್ ಅಜಮ್(ಸೌದಿ), ಗುರುಪುರದ ಜಯರಾಜ್ ಭಂಡಾರಿ(ಬಹರೈನ್), ಬಜ್ಪೆಯ ನಿತಿನ್ ಕುಮಾರ್ (ಕತಾರ್), ಗಂಜಿಮಠದ ಯೋಗೀಶ(ದುಬೈ) ಈ ಸಮಿತಿಯ ಸ್ವಯಂಸೇವಕರು. ತುರ್ತು ನೆರವಿಗಾಗಿ ವೆಬ್‌ಸೈಟ್‌ನಲ್ಲಿ ನೋಂದಾಯಿಸಿದ ವಿವರಗಳೊಂದಿಗೆ 97332010859 ಸಂಪರ್ಕಿಸುವಂತೆ ಮಾನವ ಹಕ್ಕು ರಕ್ಷಣಾ ಪ್ರತಿಷ್ಠಾನ ಅಧ್ಯಕ್ಷ ಡಾ.ರವೀಂದ್ರನಾಥ್ ಶ್ಯಾನುಬಾಗ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net