

ಉಡುಪಿ: ರಾಜ್ಯಾದ್ಯಂತ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆ ಮಹಿಳೆಯರ ಸ್ವಾವಲಂಬಿ ಬದುಕಿಗೆ ನೆರವಾಗಲಿದೆ. ರಾಜ್ಯದಲ್ಲಿ 20,000ಕ್ಕೂ ಅಧಿಕ ಸರ್ಕಾರಿ ಬಸ್‌ಗಳಿದ್ದು, ಅವುಗಳಲ್ಲಿ 18,609 ಬಸ್‌ಗಳಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ದೊರೆಯಲಿದೆ ಎಂದು ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಭಾನುವಾರ ಬನ್ನಂಜೆ ಸರ್ಕಾರಿ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಿ, ಅವರು ಮಾತನಾಡಿದರು. ರಾಜ್ಯದ ಒಟ್ಟು ಸರ್ಕಾರಿ ಬಸ್‌ಗಳಲ್ಲಿನ ಶೇ.95 ಬಸ್ ಗಳಲ್ಲಿ ಪ್ರತಿ ದಿನ 41.8 ಲಕ್ಷ ಮಹಿಳೆಯರು ಪ್ರತಿದಿನ ದೈನಂದಿನ ದುಡಿಮೆ ಮತ್ತಿತರ ಕಾರ್ಯಗಳಿಗೆ ಬಸ್‌ಗಳಲ್ಲಿ ಸಂಚರಿಸಲಿದ್ದು, ಈ ಯೋಜನೆಯಿಂದ ಸರ್ಕಾರಕ್ಕೆ ವಾರ್ಷಿಕ 4051 ಕೋಟಿ ರೂ ವೆಚ್ಚವಾಗಲಿದೆ. ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರು ಈ ಯೋಜನೆಯ ಲಾಭ ಪಡೆಯಲಿದ್ದಾರೆ ಎಂದರು.
ರಾಜ್ಯ ಸರ್ಕಾರವು ಚುನಾವಣಾ ಅವಧಿಯಲ್ಲಿ ಘೋಷಿಸಿದ ಗ್ಯಾರಂಟಿಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು. ಗೃಹಲಕ್ಷ್ಮೀ ಯೋಜನೆಗೆ ರಾಜ್ಯಾದ್ಯಂತ ಆ. 15ರಂದು ಚಾಲನೆ ನೀಡಲಾಗುವುದು. ರಾಜ್ಯದ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಹೊಂದಿರುವ ಮಹಿಳೆಯರು ಇದರ ಪ್ರಯೋಜನ ಪಡೆಯಬಹುದಾಗಿದೆ. ಈ ಕುರಿತ ಅರ್ಜಿ ನಮೂನೆ 2 ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು. ಗ್ರಾಮ ಒನ್ ಅಥವಾ ಸಿಡಿಪಿಓ, ಅಂಗನವಾಡಿ ಶಿಕ್ಷಕರ ಮೂಲಕ ಸಹ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದರು.
ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವೆಯಾಗಿ, ಜಿಲ್ಲೆಯ ಪರಿಸ್ಥಿತಿಯ ಬಗ್ಗೆ ಜಿಲ್ಲಾಧಿಕಾರಿ ಮತ್ತು ಇತರೇ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಸಾರ್ವಜನಿಕರು ಮತ್ತು ಎಲ್ಲಾ ಪಕ್ಷಗಳ ಸಹಕಾರದಿಂದ ಕಾರ್ಯನಿರ್ವಹಿಸಲಿದ್ದೇನೆ. ಜಿಲ್ಲಾಡಳಿತ ಜಿಲ್ಲೆಯ ಜನರ ಸಮಸ್ಯೆಗಳಿಗೆ 24 ಗಂಟೆಗಳ ಕಾಲ ಸದಾ ಸ್ಪಂದಿಸಬೇಕು. ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಅರಿತು ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು.
ಶಾಸಕ ಯಶ್‌ಪಾಲ್ ಸುವರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್., ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಎಂ. ಹಾಕೆ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್, ತರಬೇತಿ ನಿರತ ಐ.ಎ.ಎಸ್ ಅಧಿಕಾರಿ ಯತೀಶ್ , ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸ್ವಾಗತಿಸಿದರು. ಕ.ರಾ.ರ.ಸಾ. ನಿಗಮ ಮಂಗಳೂರು ವಿಭಾಗದ ಯಾಂತ್ರಿಕ ಅಭಿಯಂತರ ಜಯಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಾಂತ್ ಹಾವಂಜೆ ನಿರೂಪಿಸಿದರು.