

ಉಡುಪಿ/ಪಡುಬಿದ್ರಿ/ಬೆಳ್ಮಣ್: ಕೋವಿಡ್-19 ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಕೈಗೊಂಡ ನಿರ್ಧಾರದಂತೆ ಹೆಜಮಾಡಿ, ಶಿರೂರು, ಬೆಳ್ಮಣ್, ಮುಂಡ್ಕೂರಿನ ಜಾರಿಗೆಕಟ್ಟೆ ಹಾಗೂ ಸಚ್ಚೇರಿಪೇಟೆ ಸಹಿತ ಜಿಲ್ಲೆಯ ಹತ್ತು ಗಡಿ ಪ್ರದೇಶಗಳನ್ನು ಸೀಲ್‌ಡೌನ್ ಮಾಡಲಾಗಿದ್ದು, ಕಟ್ಟುನಿಟ್ಟಿನ ತಪಾಸಣೆ ನಡೆಯುತ್ತಿದೆ.
ಬುಧವಾರ ರಾತ್ರಿಯಿಂದಲೇ ಇತರ ಜಿಲ್ಲೆಗಳಿಂದ ಪ್ರವೇಶಿಸುವ ವಾಹನಗಳ ತಪಾಸಣೆ ಆರಂಭಿಸಿದ್ದು, ಅನ್ಯ ಜಿಲ್ಲೆಗಳಿಂದ ಉಡುಪಿ ಜಿಲ್ಲೆಗೆ ಆಗಮಿಸುವವರ ವಿವರ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ. ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ಪೊಲೀಸರು ವಾಪಸ್ ಕಳುಹಿಸುತ್ತಿದ್ದಾರೆ. ತುರ್ತು ಕೆಲಸಗಳಿಗೆ ತೆರಳುವ ವಾಹನಗಳು ಮಾತ್ರ ಸಂಚರಿಸಿದವು.
ಜತೆಗೆ ಜಿಲ್ಲೆಯೊಳಗೆ ಬಸ್ ಸಂಚಾರ ನಿಷೇಧಿಸಲಾಗಿದ್ದು, ಸರ್ವೀಸ್, ಸಿಟಿ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು. ವ್ಯಾಪಾರ ವಹಿವಾಟು ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಉದ್ಯೋಗಿಗಳಿಗೆ ಸಮಸ್ಯೆಯಾಯಿತು.
ಮುಂಬೈಯಿಂದ ಬಂದರೆ ಕೇಸ್: ಗಡಿ ಸೀಲ್ ಆಗಿರುವುದರಿಂದ ಮುಂಬೈಯಿಂದ ಯಾರೂ ರೈಲಿನಲ್ಲಿ ಬರಬಾರದು. ಸೇವಾ ಸಿಂಧುವಿನಲ್ಲಿ ನೋಂದಣಿ ಮಾಡದೆ ಆಗಮಿಸಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಗದೀಶ್ ಎಚ್ಚರಿಕೆ ನೀಡಿದ್ದಾರೆ. ಜಿಲ್ಲೆಯಲ್ಲಿ ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘನೆಗೆ ಸಂಬಂಧಿಸಿ ಈವರೆಗೆ 20 ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದ್ದಾರೆ.