ಉಡುಪಿ ಸೀರೆಗೆ ಅಂತಾರಾಷ್ಟ್ರೀಯ ಮಾನ್ಯತೆ: ಜಿಲ್ಲಾಧಿಕಾರಿ

UDP-26-UDUPI
Published on

ಉಡುಪಿ: ಜಿಲ್ಲೆಯ ಹೆಮ್ಮೆಯ ಉಡುಪಿ ಕೈಮಗ್ಗದ ಸೀರೆ ಭೌಗೋಳಿಕ ವಿಶಿಷ್ಠತೆ ಮಾನ್ಯತೆ ಪಡೆದಿದ್ದು, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಬೇಡಿಕೆ ಪಡೆದಿದೆ. ಮುಂದಿನ ದಿನಗಳಲ್ಲಿ ಉಡುಪಿ ಸೀರೆಯ ಉತ್ಪಾದನೆ ಅಧಿಕವಾಗಿ ವಿಶ್ವ ಮಾನ್ಯತೆ ಪಡೆಯುವಂತಾಗಬೇಕು ಎಂದು ಜಿಲ್ಲಾಧಿಕಾರಿ ಕೂರ್ಮರಾವ್ ಹೇಳಿದರು.

ಭಾನುವಾರ ರಜತಾದ್ರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ , ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ, ಸಂಜೀವಿನಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ ಸಹಯೋಗದಲ್ಲಿ ನಡೆದ ಉಡುಪಿ ಕೈ ಮಗ್ಗ ಸೀರೆ ನೇಯ್ಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಉಡುಪಿ ಸೀರೆಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಉತ್ಪಾದಿಸಿ ಎಲ್ಲಡೆ ದೊರೆಯುವಂತೆ ಮಾಡುವ ಉದ್ದೇಶದಿಂದ ಈ ನೇಯ್ಗೆ ತರಬೇತಿ ಕಾರ್ಯಕ್ರಮ ಆಯೋಜಿಸಿದ್ದು, ಇಲ್ಲಿ ತರಬೇತಿ ಪಡೆದವರು ಅತ್ಯುತ್ತಮ ರೀತಿಯ ಉಡುಪಿ ಸೀರೆಗಳನ್ನು ತಯಾರಿಸುವ ಮೂಲಕ ವಿಶ್ವದಾದ್ಯಂತ ಇದನ್ನು ಪ್ರಸಿದ್ದಿಗೊಳಿಸುವಂತೆ ತಿಳಿಸಿದರು.
ತರಬೇತಿ ನಿರತ ಐ.ಎ.ಎಸ್ ಅಧಿಕಾರಿ ಯತೀಶ್ ಮಾತನಾಡಿ, ಭೌಗೋಳಿಕ ವಿಶಿಷ್ಠತೆ ಮಾನ್ಯತೆ ಪಡೆದಿರುವ ಉಡುಪಿ ಸೀರೆಗಳು ಉಡುಪಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ದೊರೆಯದೇ ಇರುವುದನ್ನು ಗಮನಿಸಿ, ಆಸಕ್ತರಿಗೆ 6 ತಿಂಗಳ ಕಾಲ ಅಗತ್ಯ ತರಬೇತಿ ನೀಡುವುದರ ಜೊತೆಗೆ ಕೇಂದ್ರ ಮತ್ತು ರಾಜ್ಯ ಜವಳಿ ಇಲಾಖೆಯಲ್ಲಿ ಲಭ್ಯವಿರುವ ಹಲವು ಸೌಲಭ್ಯಗಳನ್ನು ದೊರಕಿಸಲಾಗುವುದು. ಹಾಗೂ ಇವರು ತಯಾರಿಸಿದ ಸೀರೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ಒದಗಿಸಿ ಹೆಚ್ಚಿನ ಲಾಭದಾಯಕ ಚಟುವಟಿಕೆಯನ್ನಾಗಿ ಮಾಡುವ ಗುರಿ ಹೊಂದಲಾಗಿದೆ ಎಂದರು.

ಉಡುಪಿ ಪ್ರಾಥಮಿಕ ನೇಕಾರರ ಸಹಕಾರ ಸಂಘದ ಅಧ್ಯಕ್ಷ ರತ್ನಾಕರ ಇಂದ್ರಾಳಿ ಮಾತನಾಡಿದರು. ಕೇಂದ್ರ ಸರ್ಕಾರದ ಮುದ್ರಾ ಯೋಜನೆಯಡಿ ಸಾಲ ಸೌಲಭ್ಯದ ಚೆಕ್ ಹಾಗೂ ಜವಳಿ ಇಲಾಖೆ ವತಿಯಿಂದ ನೀಡಲಾದ ಸವಲತ್ತುಗಳನ್ನು ವಿತರಿಸಲಾಯಿತು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್, ಜಿಲ್ಲಾ ಜವಳಿ ಮತ್ತು ಕೈಮಗ್ಗ ಇಲಾಖೆಯ ಸಹಾಯಕ ನಿರ್ದೇಶಕ ಶಿವಶಂಕರ್, ದಕ್ಷಿಣ ಕನ್ನಡ ಪದ್ಮಶಾಲಿ ಸಂಘದ ಅಧ್ಯಕ್ಷ ರಾಮದಾಸ ಶೆಟ್ಟಿಗಾರ್, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಲಕ್ಷ್ಮಣ ಕೊಡಿಯಾಲಬೈಲು, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ನಾಮ ನಿರ್ದೇಶಿತ ಸದಸ್ಯ ಮಾದವ ಶೆಟ್ಟಿಗಾರ್ ಕೆರೆಕಾಡು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net