ಒಂಟಿ ಮಹಿಳೆ, ಪುರುಷರನ್ನು ಗುರಿಯಾಗಿಸಿ ಸುಲಿಗೆ ನಡೆಸುತ್ತಿದ್ದ ಇರಾನಿ ಗ್ಯಾಂಗ್‌ ಪೊಲೀಸ್​ ಬಲೆಗೆ

Iarni Gang
Published on

ಉಡುಪಿ: ನಗರದಲ್ಲಿ ವಯಸ್ಸಾದ ಒಂಟಿ ಮಹಿಳೆ, ಪುರುಷರನ್ನು ಗುರಿಯಾಗಿಸಿ ಸುಲಿಗೆ ನಡೆಸುತ್ತಿದ್ದ ಇರಾನಿ ಗ್ಯಾಂಗ್‌ನ ನಾಲ್ವರು ಅಂತರ್ ರಾಜ್ಯ ವಂಚಕರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 7ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ಶ್ರೀರಾಮಪುರ ನಿವಾಸಿಗಳಾದ ಜಾಕೀರ್ ಹುಸೇನ್ (26), ಕಂಬರ್ ರಹೀಂ ಮಿರ್ಜಾ (32), ಅಕ್ಷಯ್ ಸಂಜಯ್ ಗೋಸಾವಿ (22) ಮತ್ತು ಶಾಹರುಖ್ ಬಂದೆನವಾಜ್ ಶೇಖ್ (24) ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರು ದಿಲ್ಲಿ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ವಯಸ್ಸಾದ ಒಂಟಿ ಮಹಿಳೆಯರು ಅಥವಾ ಗಂಡಸರು ನಡೆದುಕೊಂಡು ಹೋಗುವಾಗ ಅವರಿಗೆ ನಾವು ಪೊಲೀಸರು, ಮುಂದೆ ಗಲಾಟೆ ಆಗಿದೆ, ಚಿನ್ನಾಭರಣ ಬ್ಯಾಗಿನಲ್ಲಿ ಹಾಕಿಕೊಂಡು ಹೋಗಿ ಎಂದು ಹೇಳಿ ಅವರಲ್ಲಿದ್ದ ಚಿನ್ನಾಭರಣಗಳನ್ನು ತೆಗೆದು ಬ್ಯಾಗಿನಲ್ಲಿ ಹಾಕಿಕೊಡುವುದಾಗಿ ನಂಬಿಸಿ, ಅವರಿಗೆ ತಿಳಿಯದಂತೆ ಚಿನ್ನಾಭರಣವನ್ನು ಮೋಸದಿಂದ ಲಪಟಾಯಿಸಿದ್ದಾರೆ. ತನಿಖೆ ವೇಳೆ ಆರೋಪಿಗಳು ನಡೆಸಿದ ಕೃತ್ಯಗಳಲ್ಲಿ ಉಡುಪಿ ನಗರ -1, ಕುಂದಾಪುರ -1, ವಿಜಯಪುರದಲ್ಲಿ 4, ಚಿಕ್ಕಮಗಳೂರಿನಲ್ಲಿ 1, ಬಂಟ್ವಾಳದಲ್ಲಿ 1, ಮಂಗಳೂರು ಉರ್ವಾ ಪೊಲೀಸ್ ಠಾಣೆಯಲ್ಲಿ 1 ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿದೆ. ಇನ್ನೂ ಹಲವಾರು ಕಡೆಗಳಲ್ಲಿ ಇದೇ ರೀತಿ ಕೃತ್ಯಗಳನ್ನು ನಡೆಸಿದ್ದಾರೆ.

ಉಡುಪಿಯ ಕೃಷ್ಣಮಠದ ಪಾರ್ಕಿಂಗ್ ಸ್ಥಳದ ಬಳಿ ಅಕ್ಟೊಬರ್ 14ರಂದು ಉಡುಪಿ ಡಿಸಿಐಬಿ ಪೊಲೀಸ್ ಇನ್ಸ್‌ಪೆಕ್ಟರ್ ಮಂಜಪ್ಪ ಡಿ.ಆರ್. ಅವರು ಖಚಿತ ಮಾಹಿತಿಯಾಧಾರದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿಸುವ ವೇಳೆ ಆರೋಪಿಗಳಲ್ಲಿ ಮಂಗಳೂರಿನಲ್ಲಿ ನಡೆಸಿದ ಕೃತ್ಯದ 12 ಗ್ರಾಂ ತೂಕದ ಚಿನ್ನದ ಚೈನ್ ಯಥಾಸ್ಥಿತಿಯಲ್ಲಿತ್ತು. ಕೃತ್ಯಕ್ಕೆ ಬಳಸಿದ ಚಾವರ್‌ಲೆಟ್ ಬೀಟ್ ಕಾರು ಮತ್ತು ಹೊಂಡಾ ಶೈನ್ ಬೈಕ್ ಹಾಗೂ 2 ಹೆಲ್ಮೆಟ್ ಮತ್ತು 5,100 ರೂ. ನಗದು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಬಳಿಕ ಈ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ, ಪೊಲೀಸ್ ಕಸ್ಟಡಿಗೆ ಪಡೆದುಕೊಂಡು, ಇವರು ಮೋಸ ಮಾಡಿ ತೆಗೆದುಕೊಂಡಿದ್ದ ಚಿನ್ನಾಭರಣಗಳನ್ನು ಮಾರಾಟ ಮಾಡಿದ್ದ ಮಹಾರಾಷ್ಟ್ರ ರಾಜ್ಯದ ಅಹ್ಮದ್ ನಗರದ ಶ್ರೀರಾಮ್‌ಪುರ ಎಂಬಲ್ಲಿನ ಚಿನ್ನದ ಅಂಗಡಿಯಿಂದ 65 ಗ್ರಾಂ ಚಿನ್ನವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆರೋಪಿಗಳಿಂದ ಸ್ವಾಧೀನಪಡಿಸಿಕೊಂಡ ಸ್ವತ್ತುಗಳ ಒಟ್ಟು ಮೌಲ್ಯ 7ಲಕ್ಷ ರೂ. ಆಗಬಹುದೆಂದು ಅಂದಾಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net