

ಉಡುಪಿ: ವೇದಾಂಗದಲ್ಲಿ ಜ್ಯೋತಿರ್ವಿದ್ಯೆ ಅತ್ಯಂತ ಆಕರ್ಷಣೀಯವಾಗಿದ್ದು, ಪ್ರತಿಯೊಬ್ಬರ ಕುತೂಹಲಕ್ಕೂ ಕಾರಣವಾಗಿದೆ ಎಂದು ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಹೇಳಿದರು.
ಭಾನುವಾರ ರಾಜಾಂಗಣದಲ್ಲಿ ಕೀರ್ತಿಶೇಷ ಬೈಲೂರು ಅನಂತಪದ್ಮನಾಭ ತಂತ್ರಿಗಳ ಜನ್ಮಶತಮಾನೋತ್ಸವದ ಅಂಗವಾಗಿ ನಡೆದ ಅನಂತ ನಮನಮ್ ಸಮಾರೋಪ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ಜ್ಯೋತಿಷ್ಯವನ್ನು ದೂಷಿಸುವವರೂ ಕೂಡ ಪ್ರಮಾಣವಚನ ಸ್ವೀಕಾರಕ್ಕೆ ಸುಮೂಹೂರ್ತಗಳ ಮೊರೆ ಹೋಗುತ್ತಿದ್ದಾರೆ. ಜ್ಯೋತಿಷ್ಯ ಎಚ್ಚರಿಸುವ ವಿದ್ಯೆಯಾಗಿದ್ದು, ವಿಶ್ವವಿದ್ಯಾಲಯಗಳಲ್ಲಿ ಜ್ಯೋತಿಷ್ಯಕ್ಕೆ ಮಾನ್ಯತೆ ದೊರಕಬೇಕು. ಪಠ್ಯಪುಸ್ತಕಗಳಲ್ಲಿ ಪಾಠವಾಗಿರಬೇಕು ಎಂದು ಹೇಳಿದರು.
ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಸ್ವಾಧ್ಯಾಯನ ಮತ್ತು ಉಪದೇಶಕ್ಕೆ ಉತ್ತಮ ನಿದರ್ಶನ ಬೈಲೂರು ಅನಂತಪದ್ಮನಾಭ ತಂತ್ರಿಗಳು. ಮನೆಯನ್ನೇ ಗುರುಕುಲವಾಗಿ ಮಾಡಿಕೊಂಡು ಪಾಠಪ್ರಚನಗಳಲ್ಲಿ ನಿರತರಾಗಿದ್ದು, ಅಂಥ ವ್ಯಕ್ತಿಗಳು ಕಾಣಸುಗುವುದು ಬಹಳ ಅಪರೂಪ. ಶಿಷ್ಯರು ಗುರುಗಳ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಪರ್ಯಾಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿ ಅಧ್ಯಕ್ಷತೆ ವಹಿಸಿ, ಆಶೀರ್ವದಿಸಿದರು. ಈ ಸಂದರ್ಭದಲ್ಲಿ ವಿದ್ವಾನ್ ಹಿತ್ಲಳ್ಳಿ ನಾಗೇಂದ್ರ ಭಟ್, ಜ್ಯೋತಿರತ್ನ ಬೇಳ ಪದ್ಮನಾಭ ಶರ್ಮ, ವಿದ್ವಾನ್ ಶ್ರೀನಿವಾಸ ಅಡಿಗ, ಕಡಂದಲೆ ಕೃಷ್ಣ ಭಟ್ ಅವರನ್ನು ಸನ್ಮಾನಿಸಲಾಯಿತು.
ಡಾ. ಭಾಸ್ಕರಾನಂದ ಕುಮಾರ್, ಡಾ. ಶಿವಪ್ರಸಾದ್ ತಂತ್ರಿ ದೇರೇಬೈಲು, ಕಟೀಲು ಪದ್ಮನಾಭ ಆಸ್ರಣ್ಣ, ಪಾವಂಜೆ ವಾಸುದೇವ ಭಟ್, ಬೈಲೂರು ನಾರಾಯಣ ತಂತ್ರಿ, ಎಸ್‌ಎಂಎಸ್‌ಪಿ ಸಭಾ ಕಾರ್ಯದರ್ಶಿ ಗೋಪಾಲಕೃಷ್ಣ ಜೋಯಿಸ್, ರಾಘವೇಂದ್ರ ಮಠದ ವ್ಯವಸ್ಥಾಪಕ ಜಯತೀರ್ಥ ಆಚಾರ್ಯ ಉಪಸ್ಥಿತರಿದ್ದರು.