

ವಿಜಯವಾಣಿ ಸುದ್ದಿಜಾಲ ಉಡುಪಿ
ಕರ್ನಾಟಕ ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಗೊಳಿಸುವ ಮೂಲಕ ಸಂಸ್ಕೃತ ಭಾಷೆ ಕಡೆಗಣಿಸುವ ಪ್ರಯತ್ನ ಸಾಗಿದೆ. ಭಾರತೀಯ ಎಲ್ಲ ಭಾಷೆಗಳ ಮೂಲವಾದ ಸಂಸ್ಕೃತವನ್ನು ರಸಲೇಬೇಕಿರುವುದು ಮಹತ್ವದ ಕರ್ತವ್ಯ. ಸಂಸ್ಕೃತ ಭಾಷೆಗೆ ಮಾನ್ಯತೆ ನೀಡುವಂತಾಗಲು ರಾಜ್ಯ ಸರ್ಕಾರ ಕೂಡಲೇ ದ್ವಿಭಾಷಾ ನೀತಿ ಕೈಬಿಟ್ಟು, ತ್ರಿಭಾಷಾ ನೀತಿಯನ್ನೇ ಪುನರ್ ಜಾರಿಗೊಳಿಸಬೇಕು. ಸಾಧ್ಯವಾದಲ್ಲಿ ಚತುರ್ಭಾಷಾ ನೀತಿ ಜಾರಿಗೊಳಿಸಬೇಕು ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಆಗ್ರಹಿಸಿದರು.
ಉಡುಪಿಯ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠ, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕರ ಸಂಘ ಮತ್ತು ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕರ ಸಂಘ ಉಡುಪಿ ಜಿಲ್ಲೆ ಆಶ್ರಯದಲ್ಲಿ ಜುಲೈ 27ರಂದು ಸಂಜೆ ಆಯೋಜಿಸಿದ್ದ ಸಂಸ್ಕೃತೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು ಸರ್ಕಾರಕ್ಕೆ ಆಗ್ರಹಿಸಿದರು.
ಸಂಸ್ಕೃತ ಭಾಷೆಯ ರಕ್ಷಣೆ ಆಗದಿದ್ದಲ್ಲಿ ದೇಶೀಯ ಭಾಷೆಗಳ ರಕ್ಷಣೆಯೂ ಸಾಧ್ಯವಿಲ್ಲ. ನಮ್ಮ ರಾಷ್ಟ್ರಗೀತೆಯಲ್ಲೂ ಸಹ ಸಂಸ್ಕೃತದ ಶಬ್ದಗಳಿವೆ. ಹೀಗಾಗಿ ರಾಷ್ಟ್ರಗೀತೆಯ ಜ್ಞಾನಕ್ಕಾದರೂ ಸಂಸ್ಕೃತದ ರಕ್ಷಣೆಯಾಗಬೇಕು. ಸಂಸ್ಕೃತವನ್ನು ತಿರಸರಿಸುವುದು ರಾಷ್ಟ್ರಗೀತೆಯನ್ನೇ ತಿರಸ್ಕರಿಸಿದಂತಾಗುತ್ತದೆ. ಹೀಗಾಗಿ ಸಂಸ್ಕೃತ ಭಾಷೆಯ ರಕ್ಷಣೆಗಾಗಿ ರಾಜ್ಯ ಸರ್ಕಾರ ಭಾಷಾ ನೀತಿ ಜಾರಿಗೂ ಮೊದಲು ಮತ್ತೊಮ್ಮೆ ಪುನರ್ ಅವಲೋಕನ ಮಾಡಬೇಕು ಎಂದು ಸುಗುಣೇಂದ್ರ ಶ್ರೀ ಸಲಹೆ ನೀಡಿದರು.