

ಉಡುಪಿ: ದ.ಕ. ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಹೆಚ್ಚುವರಿ ತಪಾಸಣಾ ಕೇಂದ್ರಗಳನ್ನು ತೆರೆದು, ವಾಹನಗಳ ಮೇಲೆ ಕಣ್ಗಾವಲಿಟ್ಟಿದ್ದಾರೆ.
12 ಚೆಕ್‌ಪೋಸ್ಟ್ ಮತ್ತು 50 ಪಿಕೇಟಿಂಗ್ ಪಾಯಿಂಟ್‌ಗಳ ಮೂಲಕ ತಪಾಸಣೆ ನಡೆಸಲಾಗುತ್ತಿದೆ. ಜಿಲ್ಲೆಯ ಗಡಿಗಳಾದ ಹೆಜಮಾಡಿ, ಶಿರೂರು, ಆಗುಂಬೆ ಸೇರಿದಂತೆ ಜಿಲ್ಲೆಯನ್ನು ಪ್ರವೇಶಿಸುವ ಎಲ್ಲಾ ಮುಖ್ಯ ರಸ್ತೆಗಳು, ಕೋಮುಸೂಕ್ಷ್ಮ ಪ್ರದೇಶಗಳಲ್ಲಿ ಪೋಲಿಸರು ವಿಶೇಷವಾಗಿ ಗಸ್ತು ತಿರುಗುತ್ತಿದ್ದು, ಜಿಲ್ಲೆಯಲ್ಲಿ 62 ಕಡೆ ಖಾಕಿ ಪಡೆ ವಿಶೇಷ ಕಣ್ಗಾವಲು ಇರಿಸಿದೆ.
ಜಿಲ್ಲೆಯ ಉದ್ಯಾವರ ಬಲಾಯಿಪಾದೆ, ಗಂಗೊಳ್ಳಿ, ನೇಜಾರು, ಹೂಡೆ, ಕುಂದಾಪುರ ಶಾಸ್ತ್ರಿ ಸರ್ಕಲ್ ಸೇರಿದಂತೆ ಜಿಲ್ಲೆಯ ಸೂಕ್ಷ್ಮ ಪ್ರದೇಶ ಮತ್ತು ಜನನಿಬಿಡ ಪ್ರದೇಶಗಳಲ್ಲಿ ಜಿಲ್ಲಾ ಪೋಲಿಸರು ವಿಶೇಷವಾಗಿ ಸಾಯಂಕಾಲ 5 ಗಂಟೆಯಿಂದ 8 ಗಂಟೆಯವರೆಗೆ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ. 50 ಪೀಕೆಟಿಂಗ್ ಪಾಯಿಂಟ್‌ಗಳು ಕಾರ್ಯನಿರ್ವಹಿಸುತ್ತಿವೆ.
ರಾತ್ರಿ ಗಸ್ತು ಹೆಚ್ಚಳ
ಜಿಲ್ಲೆಯಲ್ಲಿ ರಾತ್ರಿ ಗಸ್ತುಗಳನ್ನು ಹೆಚ್ಚಳ ಮಾಡಲಾಗಿದ್ದು, ಠಾಣಾಧಿಕಾರಿ, ವೃತ್ತನಿರೀಕ್ಷಕರು, ಡಿವೈಎಸ್ಪಿ, ಹೆಚ್ಚವರಿ ಎಸ್ಪಿ, ಎಸ್ಪಿ ಸೇರಿದಂತೆ ಜಿಲ್ಲಾ ಪೋಲಿಸರ ತಂಡ ನಾನಾ ಅವಧಿಯಲ್ಲಿ ಜಿಲ್ಲೆಯಾದ್ಯಂತ ರಾತ್ರಿ ವೇಳೆಯಲ್ಲಿ ಗಸ್ತ ತಿರುಗಲಿದ್ದಾರೆ.