ರಥಬೀದಿಯಲ್ಲಿ ಪ್ರೀ ವೆಡ್ಡಿಂಗ್​ ಶೂಟ್​ ನಿಷೇಧ

Published on

ಉಡುಪಿ ಪರ್ಯಾಯ ಪುತ್ತಿಗೆ ಮಠ ಆದೇಶ

ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಕ್ರಮ

* ಮುಜುಗರ, ಅಸಭ್ಯ ರೀತಿಯಲ್ಲಿ ಚಿತ್ರೀಕರಣ * ಪುಣ್ಯ ಸ್ಥಳದಲ್ಲಿ ಸ್ವಾರ್ಥ ಕಾರ್ಯಕ್ಕೆ ಬ್ರೇಕ್​

ವಿಜಯವಾಣಿ ಸುದ್ದಿಜಾಲ ಉಡುಪಿ

ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ಸಾರ್ವಜನಿಕರಿಗೆ, ಭಕ್ತರಿಗೆ ತೊಂದರೆಯಾಗುವಂತೆ, ಮುಜುಗರ, ಅಸಭ್ಯವಾಗುವ ರೀತಿಯಲ್ಲಿ ವಿವಾಹ ಪೂರ್ವ ಫೋಟೋ ಹಾಗೂ ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿದ್ದು, ಅದನ್ನು ಪರ್ಯಾಯ ಪುತ್ತಿಗೆ ಮಠ ನಿಷೇಧಿಸಿದೆ.

Putthige 2
ಭಕ್ತಿ ಪ್ರಧಾನ ಸ್ಥಳದಲ್ಲಿ ಸರಸ-ಸಲ್ಲಾಪದಂತಹ ದೃಶ್ಯಗಳನ್ನು ಸೃಷ್ಟಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗುತ್ತಿದೆ ಎಂಬ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಪರ್ಯಾಯ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಈ ಕಠಿಣ ನಿಲುವು ತಾಳಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದೇಗುಲದ ಮುಂದೆ ಲವ್​ ಸೀನ್​!

ಪ್ರೀ ವೆಡ್ಡಿಂಗ್​ ಶೂಟಿಂಗ್​ಗೆ ಕೆಲವರು ರಥಬೀದಿಯನ್ನೇ ಪ್ರಮುಖ ತಾಣವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಜನಸಂದಣಿಯ ನಡುವೆಯೇ ಯುವ ಜೋಡಿಗಳು ಸಿನಿಮೀಯ ರೀತಿಯಲ್ಲಿ ಗುಲಾಬಿ ಹೂ ಹಿಡಿದುಕೊಂಡು ಓಡಿ ಬರುವುದು, ಪರಸ್ಪರ ಅಪ್ಪಿಕೊಳ್ಳುವುದು, ಮುದ್ದಾಡುವುದು, ಅಲ್ಲಿಯೇ ಕೂದಲು ಬಾಚುವಂತಹ ಶೂಟಿಂಗ್​ ಮಾಡಲಾಗುತ್ತಿದೆ. ಮಂಡಿಯೂರಿ ಕುಳಿತು ಪ್ರಿಯತಮೆಗೆ ಪ್ರೇಮ ನಿವೇದನೆ ಮಾಡುವ ಲವ್​ ಸೀನ್​'ನ ಫೋಟೋ ಶೂಟ್​ ನಡೆಸಲಾಗುತ್ತಿದೆ.

ಶ್ರೀಕೃಷ್ಣ ಮಠದ ಸೊತ್ತು ಬಳಕೆ

Sripadaru
ಸುಗುಣೇಂದ್ರ ಶ್ರೀ

ಇವೆಲ್ಲವೂ ಅಷ್ಟ ಮಠಗಳ ಮುಂದೆ, ಶ್ರೀಕೃಷ್ಣ ಮಠದ ರಥದ ಮುಂದೆ, ಕನಕ ಗೋಪುರದ ಮುಂದೆ ಜನರಿಗೆ ಅಸಹ್ಯವಾಗುವ ರೀತಿಯಲ್ಲಿ ಚಿತ್ರೀಕರಿಸಲಾಗುತ್ತಿದೆ. ಕೆಲವು ಫೋಟೋಗ್ರಾಫರ್ಸ್​ಗಳು ಮಠದ ಆವರಣದ ಸುತ್ತಮುತ್ತ ಇರುವ ಹಾಗೂ ಸುಲಭವಾಗಿ ಲಭಿಸುವ ಸಂಪ್ರದಾಯಬದ್ಧ ಮಠಗಳ ಪರಿಕರಗಳನ್ನು ಮದುವೆ ಫೋಟೋ ಶೂಟ್​ಗೆ ಬಳಿಸಿಕೊಳ್ಳುತ್ತಿರುವುದು ಸೂಕ್ತವಲ್ಲ. ಇತ್ತೀಚೆಗಿನ ಕೆಲ ತಿಂಗಳಿಂದ ಸ್ಥಳೀಯ ಹಾಗೂ ಹೊರ ರಾಜ್ಯದ ಕೆಲ ಪಡ್ಡೆ ಹುಡುಗರು ಇಂತಹ ಕೃತ್ಯ ನಡೆಸತೊಡಗಿದ್ದಾರೆ. ಇಂತಹ ವಾತಾವರಣ ಮತ್ತೆ ಕಂಡುಬಂದಲ್ಲಿ ಸ್ಥಳೀಯರು ಪೊಲೀಸರಿಗೆ ಅಥವಾ ಮಠದ ಆಡಳಿತದ ಗಮನ ತರಬೇಕೆಂದು ಶ್ರೀಕೃಷ್ಣ ಮಠದ ಪರ್ಯಾಯ ಆಡಳಿತ ಮಂಡಳಿ ವಿನಂತಿಸಿದೆ.

ಯಾವುದೇ ದೇವಸ್ಥಾನದ ರಥಬೀದಿ ಎಂದರೆ ಅದರದ್ದೇ ಆದ ಪಾವಿತ್ರ್ಯತೆ, ನಿಯಮವೂ ಇರುತ್ತದೆ. ದೇವಸ್ಥಾನಕ್ಕೆ ಬರುವ ಎಲ್ಲ ಭಕ್ತರೂ ಸಹ ರಥಬೀದಿಯನ್ನು ಶ್ರದ್ಧೆಯ ತಾಣವಾಗಿ ಗೌರವಿಸುತ್ತಾರೆ. ಈ ಮಾರ್ಗದಲ್ಲಿಯೇ ಉತ್ಸವ ನಡೆಯುತ್ತದೆ. ಪೂಜಾ ಕೈಂಕರ್ಯದ ನಿಮಿತ್ತ ಪರ್ಯಾಯ ಹಾಗೂ ಅಷ್ಟ ಮಠಗಳ ಶ್ರೀಗಳು ಸಂಚರಿಸುತ್ತಿರುತ್ತಾರೆ. ಅವರ ಮುಂದೆ ಹಾಗೂ ಇಂತಹ ಪುಣ್ಯ ಸ್ಥಳದಲ್ಲಿ ತಮ್ಮದೇ ಆದ ಕಲ್ಪನೆಯಲ್ಲಿ, ಸ್ವಾರ್ಥಕ್ಕಾಗಿ, ಅಸಭ್ಯವಾಗಿ, ಅಶಾಸ್ತ್ರೀಯವಾಗಿ ಪ್ರೀತಿ-ಸರಸ ಸಲ್ಲಾಪದ ವಿಡಿಯೋ ಮಾಡುತ್ತಿದ್ದಾರೆ. ಇದು ಪವಿತ್ರ ಸ್ಥಾನಕ್ಕೆ ಆಗುತ್ತಿರುವ ಅವಮಾನವಾಗಿದೆ. ಇದನ್ನು ಪರ್ಯಾಯ ಸುಗುಣೇಂದ್ರ ಶ್ರೀಗಳು ಖಂಡಿಸಿದ್ದು, ಅಸಭ್ಯ ಫೋಟೋ ಶೂಟ್​ ಮಾಡುವುದನ್ನು ನಿಷೇಧಿಸಿದ್ದಾರೆ. | ವಿದ್ವಾನ್​ ಡಾ. ಬಿ.ಗೋಪಾಲ ಆಚಾರ್ಯ. ಪುತ್ತಿಗೆ ಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net