

ಉಡುಪಿ : ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ಉಡುಪಿಯ ಶ್ರೀಮಂತಿಕೆ ಇಡೀ ವಿಶ್ವಕ್ಕೇ ಮಾದರಿ. ಪುತ್ತಿಗೆ ಶ್ರೀಗಳು ವಿದೇಶಗಳಲ್ಲಿ ಶಾಖಾಮಠಗಳನ್ನು ಸ್ಥಾಪಿಸಿ, ವಿದೇಶಿಯರಿಗೆ ಭಾರತೀಯ ಸಂಸ್ಕೃತಿ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಿ ಆರ್ ಹೆಬ್ಬಾಳ್ಕರ್ ಹೇಳಿದ್ದಾರೆ.
ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಗುರುವಾರ ನಡೆದ ಶ್ರೀ ಪುತ್ತಿಗೆ ಪರ್ಯಾಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಉಡುಪಿ ಪರ್ಯಾಯ ಕಾರ್ಯಕ್ರಮ ನೋಡಿ ನಿಜಕ್ಕೂ ಬೆರಗಾದೆ. ಸಾಂಸ್ಕೃತಿಕವಾಗಿ ಸಾಕಷ್ಟು ಶ್ರೀಮಂತಿಕೆ ಹೊಂದಿದೆ ಎಂದರು.
ಪರ್ಯಾಯ ಶ್ರೀ ಕೃಷ್ಣ ಪೂಜಾ ಕೈಂಕರ್ಯ ನೇರವೇರಿಸಲಿರುವ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಕಿರಿಯ ಯತಿಗಳಾದ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕರ್ನಾಟಕ ವಿಧಾನ ಸಭೆ ಸಭಾಧ್ಯಕ್ಷರಾದ ಯು.ಟಿ.ಖಾದರ್, ಶಾಸಕರಾದ ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಶ್ರೀ ಕೃಷ್ಣನ ಭಕ್ತರು ಉಪಸ್ಥಿತರಿದ್ದರು.