

ಮಂಗಳೂರು: ಉಡುಪಿ ಪರ್ಯಾಯಕ್ಕೆ ಮಂಗಳೂರಿನಿಂದ ಹೊರೆ ಕಾಣಿಕೆ ಸಲ್ಲಿಸುವ ಸಲುವಾಗಿ ನಗರದ ಶರವು ಶ್ರೀ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ ಹೊರೆಕಾಣಿಕೆ ಸಂಗ್ರಹಣಾ ಕೇಂದ್ರ ಜನವರಿ ೧೪ ರಂದು ಶುಭಾರಂಭಗೊಂಡಿತು.
ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಉಡುಪಿಯ ಪರ್ಯಾಯ ಉತ್ಸವದಲ್ಲಿ ಸರ್ವರಿಗೂ ತೊಡಗಿಕೊಳ್ಳಲು ಇದೊಂದು ಸದವಕಾಶವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯದಲ್ಲಿ ಸ್ಪಂದಿಸುವ ಮೂಲಕ ಕೃಷ್ಣ ಸೇವೆಯಲ್ಲಿ ತೊಡಗಿಕೊಳ್ಳುವಂತಾಗಲೆಂದು ಹಾರೈಸಿದರು.
ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಶಶಿಧರ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರಗಿತು. ಪರ್ಯಾಯೋತ್ಸವ ಸ್ವಾಗತ ಸಮಿತಿಯ ಪ್ರಮುಖ ಎಸ್.ಪ್ರದೀಪ ಕುಮಾರ ಕಲ್ಕೂರ ಅವರು ಮಾತನಾಡಿ, ಭಕ್ತಾದಿಗಳು ಬೇಳೆ ಕಾಳು, ತರಕಾರಿ, ಧನ ಹಾಗೂ ಪಾತ್ರೆಗಳ ರೂಪದಲ್ಲೂ ತಮ್ಮ ದೇಣಿಗೆಯನ್ನು ಹೊರೆ ಕಾಣಿಕೆ ಸಂಗ್ರಹಣಾ ಕೇಂದ್ರಕ್ಕೆ ತಂದೊಪ್ಪಿಸಬಹುದು. ಜನವರಿ 17 ರಂದು ಭಕ್ತರಿಂದ ಹಾಗೂ ವಿವಿಧ ಕ್ಷೇತ್ರಗಳಿಂದ ಸಂಗ್ರಹಿಸಲ್ಫಟ್ಟ ಹೊರೆಕಾಣಿಕೆಯ ಮೆರವಣಿಗೆಯಲ್ಲೂ ಪಾಲ್ಗೊಳ್ಳುವಂತೆ ಅವರು ವಿನಂತಿಸಿದರು.
ಈ ಸಂದರ್ಭ ಹೊರೆಕಾಣಿಕೆ ಸಂಗ್ರಹಣಾ ಕೇಂದ್ರದ ನಿರ್ವಾಹಕಿ ಶಶಿಪ್ರಭಾ ಐತಾಳ್, ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ, ಕೂಟಮಹಾಜಗತ್ತಿನ ಮಂಗಳೂರು ವಲಯಾಧ್ಯಕ್ಷ ಚಂದ್ರಶೇಖರ ಮಯ್ಯ, ಹಿರಿಯ ಯಕ್ಷಗಾನ ಪ್ರಸಂಗಕರ್ತ ನಿತ್ಯಾನಂದ ಕಾರಂತ ಪೊಳಲಿ,ಎಸ್.ಕೆ.ಡಿ.ಬಿ.ಅಸೊಶಿಯೇಶನ್ ಅಧ್ಯಕ್ಷ ಪ್ರಭಾಕರ್ ರಾವ್ ಪೇಜಾವರ, ಕೇರಳ ಸಮಾಜಂನ ಕರುಣಾಕರನ್, ರಾಮದಾಸ್ ಕಟೀಲ್, ಸಾಮಾಜಿಕ ಕಾರ್ಯಕರ್ತರಾದ ಸುಧಾಕರ ರಾವ್ ಪೇಜಾವರ, ಟಿ.ಕೆ.ಸುಧೀರ್, ಧನಕೀರ್ತಿ, ಎಂ.ಎಸ್.ಗುರುರಾಜ್ ಮೊದಲಾದವರು ಉಪಸ್ಥಿತರಿದ್ದರು.