

ಉಡುಪಿ: ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ರೆಕಾರ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ತನಿಖಾ ಇಲಾಖೆ(ಸಿಐಡಿ) ಮೊದಲ ಹಂತದ ತನಿಖೆಯನ್ನು ಪೂರ್ಣಗೊಳಿಸಿದೆ.
ಆ.8ರಂದು ಉಡುಪಿಗೆ ಆಗಮಿಸಿದ್ದ ತನಿಖಾಧಿಕಾರಿ ಸಿಐಡಿ ಡಿವೈಎಸ್ಪಿ ಅಂಜುಮಾಲಾ ನಾಯಕ್ ನೇತೃತ್ವದ ತನಿಖಾ ತಂಡ ಈಗಾಗಲೇ ಉಡುಪಿಯ ನೇತ್ರ ಜ್ಯೋತಿ ಇನ್ಸಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ನಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿ, ಸಂತ್ರಸ್ತ, ಆರೋಪಿಗಳು ಹಾಗೂ ಕಾಲೇಜು ಆಡಳಿತ ಮಂಡಳಿಯ ಪ್ರತಿನಿಧಿಗಳ ಹೇಳಿಕೆ ದಾಖಲಿಸಿದೆ. ಬೆರಳಚ್ಚು ಸಂಗ್ರಹಿಸಿ ಈ ಹಿಂದೆ ಪೊಲೀಸರು ಸಂಗ್ರಹಿಸಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಆರೋಪಿ ವಿದ್ಯಾರ್ಥಿನಿಯರಿಂದ ವಶಪಡಿಸಿಕೊಂಡ ಮೂರು ಮೊಬೈಲ್ ಫೋನ್ಗಳ ಬಗ್ಗೆ ಹೈದರಾಬಾದ್ನ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಕಾಯುತ್ತಿದ್ದಾರೆ. ವರದಿ ಪಡೆದ ನಂತರ ಸಿಐಡಿ ಅಧಿಕಾರಿಗಳ ತಂಡ, ಚಾರ್ಜ್ಶೀಟ್ ಸಿದ್ಧಪಡಿಸಲಿದೆ.
ಮೂವರು ಹುಡುಗಿಯರು ತಮ್ಮ ಮೊಬೈಲ್ ಕ್ಯಾಮೆರಾ ಬಳಸಿ ಕಾಲೇಜಿನ ವಾಶ್ರೂಮ್ನಲ್ಲಿ ಇನ್ನೊಬ್ಬ ಯುವತಿಯ ವಿಡಿಯೋ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.