

ಉಡುಪಿ: ಜಿಲ್ಲೆಯಾದ್ಯಂತ ಒಂಬತ್ತು ದಿನ ನಡೆದ ಶರನ್ನವರಾತ್ರಿ ಮಹೋತ್ಸವ ಮಂಗಳವಾರ ವಿಜಯದಶಮಿ ಆಚರಣೆಯೊಂದಿಗೆ ಸಂಪನ್ನಗೊಡಿತು.
ವಿಶೇಷವಾಗಿ ದೇವಿ ದೇವಸ್ಥಾನಗಳಲ್ಲಿ ನವರಾತ್ರಿ ಪರ್ವಕಾಲದಲ್ಲಿ ಚಂಡಿಕಾ ಹವನ, ಸಪ್ತಶತಿ ಪಾರಾಯಣ, ದುರ್ಗಾ ಹವನ, ದುರ್ಗಾ ನಮಸ್ಕಾರ, ರಥೋತ್ಸವ ಜರಗಿತು. ಪ್ರತಿದಿನ ಸಾವಿರಾರು ಮಂದಿಗೆ ಅನ್ನದಾನ ನೆರವೇರಿತು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಮಹಾನವರಾತ್ರಿ ಉತ್ಸವವನ್ನು ವೈಭವದಿಂದ ಆಚರಿಸಲಾಯಿತು. ಪ್ರತಿದಿನ ಚಂಡಿಕಾಯಾಗ, ರಥೋತ್ಸವ, ವಿಜಯದಶಮಿಯಂದು ಮಕ್ಕಳಿಗೆ ಅಕ್ಷರಾಭ್ಯಾಸ ಮತ್ತು ನವಾನ್ನಪ್ರಾಶನ ಜರಗಿತು. ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನ, ಸೌಕೂರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ, ಉಡುಪಿ ಇಂದ್ರಾಳಿ, ಬೈಲೂರು, ಅಂಬಲಪಾಡಿ, ಪುತ್ತೂರು, ಕನ್ನರ್ಪಾಡಿ ದೇವಸ್ಥಾನಗಳಲ್ಲಿ ವೈಭವದಿಂದ ನವರಾತ್ರಿ ಆಚರಿಸಲಾಯಿತು. ವಿಜಯದಶಮಿಯಂದು ಸಾಯಂಕಾಲ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನಕ್ಕೆ ಶ್ರೀಕೃಷ್ಣಮಠದಿಂದ ಮೆರವಣಿಗೆ ಮೂಲಕ ದೇವರ ಪ್ರಸಾದವನ್ನು ತಂದು ಶಮೀ ವೃಕ್ಷದ ಬಳಿ ಪೂಜೆ ನೆರವೇರಿಸಿ, ದೇವಿಯ ಪ್ರಸಾದವನ್ನು ಮಠಕ್ಕೆ ತೆಗೆದುಕೊಂಡು ಹೋಗಲಾಯಿತು. ಕೃಷ್ಣಮಠದಲ್ಲಿ ಕದಿರು ಕಟ್ಟುವ ಕಾರ್ಯ ನಡೆಯಿತು. ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಉಚ್ಚಿಲ ದಸರಾ ಅದ್ದೂರಿಯಾಗಿ ಆಚರಿಸಲಾಯಿತು. ಅಪಾರ ಸಂಖ್ಯೆಯ ಭಕ್ತರು ದರ್ಶನ ಪಡೆದರು.
ಮಧ್ವ ಜಯಂತಿ
ವಿಜಯ ದಶಮಿಯಂದು ಮಧ್ವಾಚಾರ್ಯರು ಪಾಜಕ ಕ್ಷೇತ್ರದಲ್ಲಿ ಅವತರಿಸಿದ್ದು, ಮಂಗಳವಾರ ಕಾಣಿಯೂರು ಶ್ರೀಪಾದರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅಚಾರ್ಯರು ಅಕ್ಷರಾಭ್ಯಾಸ ಮಾಡಿದ ಶಿಲೆಯಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ನೂರಾರು ಮಕ್ಕಳು ವಿದ್ಯಾರಂಭ ಮಾಡಿದರು. ಅನಂತೇಶ್ವರ ದೇವಸ್ಥಾನದಲ್ಲಿರುವ ಅಚಾರ್ಯರ ಅದೃಶ್ಯ ಸ್ಥಳದಲ್ಲಿ ಪರ್ಯಾಯ ಶ್ರೀಪಾದರು ವಿಶೇಷ ಪೂಜೆ ನೆರವೇರಿಸಿದರು.