ಉಡುಪಿ ಜಿಲ್ಲೆಗೆ 6 ನಮ್ಮ ಕ್ಲಿನಿಕ್ ಮಂಜೂರು

health dpt logo
Published on

ಉಡುಪಿ: ನಗರ ಪ್ರದೇಶದ ಸಾರ್ವಜನಿಕರಿಗೆ ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹೊರತುಪಡಿಸಿ ರಾಜ್ಯಾದ್ಯಂತ ವಾರ್ಡ್ ಮಟ್ಟದಲ್ಲಿ ನಮ್ಮ ಕ್ಲಿನಿಕ್‌ಗಳನ್ನು ತೆರೆಯಲು ರಾಜ್ಯ ಸರ್ಕಾರ ಉದ್ದೇಶಿಸಿದ್ದು, ಉಡುಪಿ ಜಿಲ್ಲೆಯಲ್ಲಿ 6 ಕಡೆಗಳಲ್ಲಿ ನಮ್ಮ ಕ್ಲಿನಿಕ್ ಪ್ರಾರಂಭಿಸಲು ಅನುಮೋದನೆ ಲಭಿಸಿದೆ.

ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ 3, ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ 1, ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ 2 ನಮ್ಮ ಕ್ಲಿನಿಕ್ ಗಳನ್ನು ತೆರೆಯಲು ಅನುಮತಿ ದೊರೆತಿದೆ. ಈಗಾಗಲೇ ಕ್ಲಿನಿಕ್ ಪ್ರಾರಂಭಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಸಿಬ್ಬಂದಿ ನೇಮಕ ಪ್ರಕ್ರಿಯೆ ನಡೆಯುತ್ತಿದೆ.

ನಮ್ಮ ಕ್ಲಿನಿಕ್ ವಿಶೇಷತೆ
ನಮ್ಮ ಕ್ಲಿನಿಕ್‌ನಲ್ಲಿ ತಲಾ ಓರ್ವ ವೈದ್ಯ, ನರ್ಸ್, ಲ್ಯಾಬ್ ಟೆಕ್ನೀಷಿಯನ್ ಮತ್ತು ಡಿ ಗ್ರೂಫ್ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದು, ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಅಗತ್ಯ ಔಷಧಿ ವಿತರಣೆ ನಡೆಯಲಿದೆ. 12 ರೀತಿಯ ವಿವಿಧ ಆರೋಗ್ಯ ಸೇವೆ, ರಕ್ತ, ಮೂತ್ರ ಪರೀಕ್ಷೆ ಸೇರಿದಂತೆ ಲ್ಯಾಬ್‌ನಲ್ಲಿ 14 ರೀತಿಯ ವಿವಿಧ ಪ್ರಯೋಗಾಲಯ ಸೇವೆ ದೊರೆಯಲಿದೆ. ಬೆಳಗ್ಗೆ 9 ರಿಂದ ಸಾಯಂಕಾಲ 4.30ರ ವರೆಗೆ ಈ ಕ್ಲಿನಿಕ್‌ಗಳು ಕಾರ್ಯ ನಿರ್ವಹಿಸಲಿದ್ದು, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದವರಿಗೆ ಇ-ಸಂಜೀವಿನಿ ಮತ್ತು ಟೆಲಿ ಕೌನ್ಸಿಲಿಂಗ್ ವ್ಯವಸ್ಥೆ ಕೂಡಾ ಲಭ್ಯವಿದೆ.

ಪ್ರತಿ ಕ್ಲಿನಿಕ್‌ಗೆ 36 ಲಕ್ಷ ರೂ.
ರಾಜ್ಯ ಸರ್ಕಾರದ ಅನುದಾನದಲ್ಲಿ ನಮ್ಮ ಕ್ಲಿನಿಕ್ ಆರಂಭಿಸಲಾಗುತ್ತಿದ್ದು, ಪ್ರತಿ ಕ್ಲಿನಿಕ್‌ಗೆ ವಾರ್ಷಿಕ 36 ಲಕ್ಷ ರೂ. ನೀಡಲಾಗುತ್ತದೆ. ಈ ಮೊತ್ತದಲ್ಲಿ ಸಿಬ್ಬಂದಿ ವೇತನ, ಕ್ಲಿನಿಕ್ ನಿರ್ವಹಣೆ, ಖಾಸಗಿ ಕಟ್ಟಡವಾಗಿದ್ದರೆ ಬಾಡಿಗೆ ಸೇರಿದಂತೆ ಎಲ್ಲಾ ವೆಚ್ಚಗಳನ್ನು ನಿರ್ವಹಿಸಬೇಕು. ಈಗಾಗಲೇ ನಮ್ಮ ಕ್ಲಿನಿಕ್ ಬೇಕಾದ ಅನುದಾನ ಬಿಡುಗಡೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net