ಉಡುಪಿಯಲ್ಲಿ ನಾಗರಪಂಚಮಿ ಸಂಭ್ರಮ

udp-mutt
Published on

ಉಡುಪಿ: ಜಿಲ್ಲೆಯಾದ್ಯಂತ ಸೋಮವಾರ ನಾಗರಪಂಚಮಿ ಹಬ್ಬವನ್ನು ವಿವಿಧ ದೇವಸ್ಥಾನಗಳಲ್ಲಿ, ನಾಗ ಸಾನ್ನಿಧ್ಯಗಳಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಕೋವಿಡ್ ಹಿನ್ನೆಲೆಯಲ್ಲಿ ಕಳೆದ 2 ವರ್ಷಗಳಿಂದ ನಾಗರಪಂಚಮಿ ಹಬ್ಬವನ್ನು ಸರಳವಾಗಿ ಆಚರಿಸುವಂತೆ ಜಿಲ್ಲಾಡಳಿತ ಮಾರ್ಗಸೂಚಿ ಜಾರಿ ಮಾಡಿತ್ತು. ಆದರೆ ಈ ಬಾರಿ ಕೋವಿಡ್ ಪ್ರಕರಣ ಇಳಿಮುಖವಾಗಿದ್ದು, ಸಾರ್ವಜನಿಕರು ನಿರ್ಭೀತಿಯಿಂದ ಕುಟುಂಬದ ನಾಗಬನಗಳಲ್ಲಿ ನಾಗನ ಮೂರ್ತಿಗೆ ಹಾಲಿನ ಅಭಿಷೇಕ ನೆರವೇರಿಸಿ ಸೇವೆ ಸಲ್ಲಿಸಿದರು.

ಶ್ರೀಕೃಷ್ಣ ಮಠದ ಸುಬ್ರಹ್ಮಣ್ಯ ಗುಡಿ, ನಾಲ್ಕು ಸ್ಕಂದಾಲಯಗಳಾದ ಮುಚ್ಚಲಕೋಡು, ಮಾಂಗೋಡು, ತಾಂಗೋಡು, ಅರಿತೋಡು ಸುಬ್ರಹ್ಮಣ್ಯ ದೇವಸ್ಥಾನ, ಕರಂಬಳ್ಳಿಯ ವೆಂಕಟರಮಣ ದೇವಸ್ಥಾನ, ಶ್ರೀವೆಂಕಟರಮಣ ದೇವಸ್ಥಾನ, ಗುಂಡಿಬೈಲು ಸುಬ್ರಹ್ಮಣ್ಯ ದೇವಸ್ಥಾನ, ಕಿನ್ನಿಮೂಲ್ಕಿಯ ಕನ್ನರ್ಪಾಡಿ ದೇವಸ್ಥಾನದ ಬಳಿಯ ನಾಗಸನ್ನಿಧಿ, ಮಠದಬೆಟ್ಟುವಿನ ಸಪರಿವಾರಕ ಶ್ರೀ ನಾಗಬ್ರಹ್ಮಸ್ಥಾನ, ಸಗ್ರಿ ವಾಸುಕಿ ಅನಂತಪದ್ಮನಾಭ ದೇವಸ್ಥಾನ, ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನ ಮೊದಲಾದ ಕಡೆ ತನು (ಹಾಲು, ಎಳನೀರು, ಜೇನುತುಪ್ಪ) ಸಮರ್ಪಣೆ ಮಾಡಿ ನಾಗದೇವರಿಗೆ ಪೂಜೆ ಸಲ್ಲಿಸಲಾಯಿತು.

ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ವಾದಿರಾಜತೀರ್ಥರು ಪ್ರತಿಷ್ಠೆ ಮಾಡಿದ ತಕ್ಷಕ ಸನ್ನಿಧಾನದಲ್ಲಿ ಹಾಗೂ ಅಶ್ವತ್ಥಮರದ ನಾಗ ಸನ್ನಿಧಾನದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಶಿರಸಿ ಸೋಂದಾ ಕ್ಷೇತ್ರದಲ್ಲಿ ಚಾತುರ್ಮಾಸ್ಯ ವ್ರತಾಚರಣೆಯಲ್ಲಿರುವ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಮಠದ ನಾಗಬನದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಶೀರೂರು ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ, ಭೀಮನಕಟ್ಟೆ ಮಠದ ಶ್ರೀ ರಘುವರೇಂದ್ರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net