15 ದಿನದೊಳಗೆ ಕಲ್ಸಂಕದಲ್ಲಿ ಸಿಗ್ನಲ್​ ಲೈಟ್​ ಅಳವಡಿಕೆ

udp-27-cmc
Published on

ಉಡುಪಿ: ನಗರದ ಕಲ್ಸಂಕ ಜಂಕ್ಷನ್​ನಲ್ಲಿ ವಾಹನ ದಟ್ಟಣೆಯಿಂದ ಟ್ರಾಫಿಕ್​ ನಿಯಂತ್ರಣಕ್ಕಾಗಿ ಹಾಕಿದ್ದ ಬ್ಯಾರಿಕೇಡ್​ ತೆರವು ಮಾಡಲಾಗಿದ್ದು, ಪೊಲೀಸ್​ ಇಲಾಖೆ ಮಾರ್ಗಸೂಚಿ ಪ್ರಕಾರ ನಗರಸಭೆಯ ಅನುದಾನದಲ್ಲಿ 15 ದಿನದೊಳಗೆ ಕಲ್ಸಂಕದಲ್ಲಿ ಟ್ರಾಫಿಕ್​ ಸಿಗ್ನಲ್​ ಅಳವಡಿಸಲಾಗುವುದು ಎಂದು ಉಡುಪಿ ಶಾಸಕ ಯಶ್​ ಪಾಲ್​ ಸುವರ್ಣ ತಿಳಿಸಿದ್ದಾರೆ.

ಸೋಮವಾರ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಅಧ್ಯಕ್ಷತೆಯಲ್ಲಿ ಸಾಮಾನ್ಯ ನಡೆಯಿತು. ಈ ಸಂದರ್ಭದಲ್ಲಿ "ಕಲ್ಸಂಕಕ್ಕೆ ಗ್ರೀನ್​ ಸಿಗ್ನಲ್​ ಯಾವಾಗ' ವಿಜಯವಾಣಿ ವರದಿ ಪ್ರಸ್ತಾಪಿಸಿದ ಸದಸ್ಯೆ ಸುಮಿತ್ರಾ ನಾಯಕ್​, ಪ್ರಮುಖ ಜಂಕ್ಷನ್ನಲ್ಲಿ ಏಕಾಏಕಿ ಬ್ಯಾರಿಕೇಡ್​ ಅಳವಡಿಕೆ ಮಾಡಿದ್ದರಿಂದ ಜನರಿಗೆ ಬಹಳಷ್ಟು ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಡಿಸೆಂಬರ್​ ತಿಂಗಳ ಕೊನೆಯ ವಾರದಿಂದ ಉಡುಪಿಯಲ್ಲಿ ಭಾರೀ ವಾಹನ ದಟ್ಟಣೆ ಕಾರಣಕ್ಕೆ ಸಂಚಾರ ವ್ಯವಸ್ಥೆಯಲ್ಲಿ ತಾತ್ಕಾಲಿಕವಾಗಿ ಮಾರ್ಪಾಡು ಮಾಡಲಾಗಿತ್ತು. ಈಗ ಸಾರ್ವಜನಿಕರು ಬ್ಯಾರಿಕೇಡ್​ ತೆರವು ಮಾಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗಳಲ್ಲಿ ಚರ್ಚೆ ನಡೆಸಿ ಬ್ಯಾರಿಕೇಡ್​ ತೆರವಿಗೆ ಕ್ರಮವಹಿಸಲಾಗಿದೆ. ಸರಣಿ ರಜೆ ಹಾಗೂ ವಾರಾಂತ್ಯದಲ್ಲಿ ಪ್ರವಾಸಿಗರ ದಟ್ಟಣೆ ಉಂಟಾದ ಸಂದರ್ಭದಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ವಾಹನ ಸಂಚಾರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್​ಪಿ ತಿಳಿಸಿದ್ದಾರೆ. ಜನರಿಗೆ ಸಮಸ್ಯೆಯಾಗದ ರೀತಿಯಲ್ಲಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಸಲಾಗುವುದು ಎಂದು ಹೇಳಿದರು.

ಬೀದಿನಾಯಿ ಸಮಸ್ಯೆ

ಸದಸ್ಯೆ ಅಮೃತಾಕೃಷ್ಣಮೂರ್ತಿ ಮಾತನಾಡಿ, ಬೀದಿನಾಯಿಗಳ ಕಾಟದಿಂದ ಶಾಲಾ ಮಕ್ಕಳಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಪಾಲಕರು ಮಕ್ಕಳನ್ನು ಹೊರಗೆ ಕಳುಹಿಸಲು ಹೆದರುವಂತಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಬೀದಿನಾಯಿ ಸಮಸ್ಯೆ ಜಿಲ್ಲಾವ್ಯಾಪ್ತಿ ಹೊಂದಿದ್ದು, ಕಡೆಕಾರ್​ , ಅಂಬಲಪಾಡಿ ಮೊದಲಾದ ಕಡೆಗಳಿಂದ ನಗರಕ್ಕೆ ಬೀದಿನಾಯಿಗಳು ಬರುತ್ತವೆ. ಬೇಲಿ ಹಾಕಿ ತಡೆಯಲು ಸಾಧ್ಯವಿಲ್ಲ. ಹೀಗಾಗಿ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಸಭೆ ನಡೆಸಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದರು.

ಒಳಚರಂಡಿಗೆ ತ್ಯಾಜ್ಯ ನೀರು

ಸದಸ್ಯ ವಿಜಯಕೊಡವೂರು ಮಾತನಾಡಿ, ಕೊಳಚೆ ನೀರು ಸೇರುತ್ತಿರುವ ಕಾರಣಕ್ಕೆ ಇಂದ್ರಾಣಿ ನದಿ ನೀರು ಬಣ್ಣ ಬದಲಾಗುತ್ತಿದೆ ಎಂದರು. ಇದಕ್ಕೆ ಧ್ವನಿಗೂಡಿಸಿದ ಶಾಸಕ ಯಶ್ಪಾಲ್​ ಸುವರ್ಣ, ಮಣಿಪಾಲ ಭಾಗದಲ್ಲಿ ಹೋಟೆಲ್​ ಮತ್ತು ವಸತಿ ಸಮುಚ್ಚಯಗಳಲ್ಲಿ ಶೌಚಾಲಯ ತ್ಯಾಜ್ಯ ಸಂಸ್ಕರಿಸದೆ ನೇರವಾಗಿ ಒಳಚರಂಡಿಗೆ ಬಿಡುತ್ತಿದ್ದಾರೆ. ಸ್ಲಂಗಳಲ್ಲಿ ಜಾಗದ ಮಾಲೀಕರು ಕಾರ್ಮಿಕರಿಗೆ ಸೂಕ್ತ ಶೌಚಾಲಯದ ವ್ಯವಸ್ಥೆ ಮಾಡಿಕೊಡಬೇಕು. ಈ ನಿಯಮ ಪಾಲಿಸದಿದ್ದರೆ ನಿರ್ದಾಣ್ಯ ಕ್ರಮ ಕೈಗೊಳ್ಳಬೇಕು ಎಂದರು. ಇದಕ್ಕೆ ಉತ್ತರಿಸಿದ ಸಹಾಯಕ ಅಭಿಯಂತರ ದುರ್ಗಾಪ್ರಸಾದ್​, ಮಲ್ಪೆ ಮತ್ತು ಮಣಿಪಾಲ ಭಾಗದಲ್ಲಿ ತಾಜ್ಯವನ್ನು ನೇರವಾಗಿ ಒಳಚರಂಡಿಗೆ ಸಂಪರ್ಕಿಸುವ 474 ಕಟ್ಟಡಗಳನ್ನು ಗುರುತಿಸಿ ನೋಟಿಸ್​ ನೀಡಲಾಗಿದೆ. 15 ದಿನದೊಳಗೆ ಉತ್ತರಿಸುವಂತೆ ತಿಳಿಸಲಾಗಿದೆ. 13 ಮಂದಿ ಹೋಟೆಲ್​ ಮಾಲೀಕರಿಗೂ ನೋಟಿಸ್​ ನೀಡಲಾಗಿದೆ ಎಂದರು.

ದಾಖಲೆ ತಿದ್ದುಪಡಿ ಅನುಮಾನ

ಸದಸ್ಯ ವಿಜಯಕೊಡವೂರು ಮಾತನಾಡಿ, ಅಜ್ಜರಕಾಡು ವಾರ್ಡ್​ನಲ್ಲಿ ವಾಸ್ತವ್ಯ ಕಟ್ಟಡಕ್ಕೆ ಅನುಮತಿ ಪಡೆದು ಪ್ರಾರ್ಥನ ಮಂದಿರು ನಡೆಸುತ್ತಿರುವ ಬಗ್ಗೆ ಈ ಹಿಂದಿನ ಸಭೆಯಲ್ಲಿ ವಿಷಯ ಪ್ರಸ್ತಾಪಿಸಲಾಗಿತ್ತು. ಭಾನುವಾರ ಪ್ರಾರ್ಥನಾ ಸಭೆ, ಮತಾಂತರ ಕಾರ್ಯವೂ ನಡೆಯುತ್ತಿವೆ. ಅಧಿಕಾರಿಗಳು ಏನು ಕ್ರಮಕೈಗೊಂಡಿದ್ದಾರೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕಂದಾಯ ಅಧಿಕಾರಿ, ಚರ್ಚ್​ ಹೆಸರಿನಲ್ಲಿ 1126 ಚದರಡಿ ಪ್ರದೇಶದಲ್ಲಿ ವಾಸ್ತವ್ಯ ಕಟ್ಟಡಕ್ಕೆ ಅನುಮತಿ ಪಡೆಯಲಾಗಿದೆ. ಆದರೆ ಕಟ್ಟಡದ ವಿಸ್ತೀರ್ಣ ನಿಗದಿತ ಪ್ರಮಾಣಕ್ಕಿಂತ ಅಧಿಕವಾಗಿದೆ ಎಂದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಕಂಪೌಂಡ್​ನಲ್ಲಿರುವ ಪ್ರಚೋದನಕಾರಿ ಬರಹ ತೆರವು ಮಾಡಿಲ್ಲ. ಈ ಹಿಂದೆ ನೀಡಿದ ದಾಖಲೆಯಲ್ಲಿ ಚರ್ಚ್​ ಬಗ್ಗೆ ಉಲ್ಲೇಖವಿಲ್ಲ. ಈಗ ಹೆಸರು ಸೇರ್ಪಡೆಯಾಗಿರುವ ಗುಮಾನಿ ಇದೆ. ಕೈಬರಹ ಹೊಂದಾಣಿಕೆಯಾಗುತ್ತಿಲ್ಲ. ಒಂದು ವೇಳೆ ದಾಖಲೆ ತಿದ್ದುಪಡಿ ಮಾಡಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಪೌರಾಯುಕ್ತರು, ಸದಸ್ಯರಿಗೆ 1 ವಾರದೊಳಗೆ ಮೂಲಪ್ರತಿ ದಾಖಲೆಗಳನ್ನು ಒದಗಿಸಲಾಗುವುದು ಎಂದರು. ಉಪಾಧ್ಯೆ ರಜನಿ ಹೆಬ್ಬಾರ್​, ಪೌರಾಯುಕ್ತ ಡಾ. ಉದಯ್​ ಶೆಟ್ಟಿ, ಸ್ಥಾಯೀ ಸಮಿತಿ ಅಧ್ಯಕ್ಷ ಸುಂದರ್​ ಕಲ್ಮಾಡಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net