

ವಿಜಯವಾಣಿ ಸುದ್ದಿಜಾಲ ಉಡುಪಿ
ಕರ್ನಾಟಕದ ಕರಾವಳಿ ಜಿಲ್ಲೆ ಮತ್ತು ಚಿಕ್ಕಮಗಳೂರು ರೈಲ್ವೆ ಬೇಡಿಕೆಗಳ ಕುರಿತಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಜೂ.20ರಂದು ದೆಹಲಿಯ ರೈಲ್ವೆ ಭವನದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.
ಈ ವೇಳೆ ಸಚಿವ ಸೋಮಣ್ಣ ಮಾತನಾಡಿ, ಚಿಕ್ಕಮಗಳೂರಿನಿಂದ ತುಮಕೂರು, ಬೆಂಗಳೂರು ಮಾರ್ಗವಾಗಿ ತಿರುಪತಿಗೆ ನೂತನ ರೈಲ್ವೆ ಸೇವೆ ಆರಂಭಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅಲ್ಲದೆ, ಸೂಕ್ತ ಪರಿಶೀಲನೆಯೊಂದಿಗೆ ಶೀಘ್ರವಾಗಿ ಚಿಕ್ಕಮಗಳೂರು-ತಿರುಪತಿ ರೈಲು ಸೌಲಭ್ಯ ಒದಗಿಸುವಂತೆಯೂ ಸೂಚಿಸಿದರು.
ಬೆಂಗಳೂರು-ಕಾರವಾರ ಮಾರ್ಗದ ರೈಲ್ವೆ ವಿದ್ಯುದೀಕರಣ ಸಮಸ್ಯೆಯಿಂದ ತಾತ್ಕಾಲಿಕವಾಗಿ ಹಗಲು ರೈಲಿಗೆ ಪರ್ಯಾಯವಾಗಿ ಪಂಚಗಂಗಾ ರಾತ್ರಿ ರೈಲಿಗೆ ಹೆಚ್ಚುವರಿ ಭೋಗಿ ಜೋಡಿಸಲಾಗಿದೆ. ಹೀಗಾಗಿ ಪ್ರಯಾಣಿಕರಿಗೆ ಬೆಂಗಳೂರು ತಲುಪಲು ವಿಳಂಬವಾಗುತ್ತಿದೆ. ಸರ್ಕಾರಿ ನೌಕರರು ಸೇರಿದಂತೆ ಪ್ರಯಾಣಿಕರಿಗೆ ದೈನಂದಿನ ಕರ್ತವ್ಯ ಪಾಲನೆಗೂ ತೊಂದರೆಯಾಗುತ್ತಿದೆ. ಸಮಯ ಪಾಲನೆ ಮಾಡುವಂತೆ ಹಾಗೂ ಬೆಂಗಳೂರು-ಕಾರವಾರದ ಮೂಲಕ ಹೆಚ್ಚುವರಿಯಾಗಿ ರಾತ್ರಿ ರೈಲು ಮಂಜೂರಾತಿ ಮಾಡಬೇಕೆಂದು ಸಂಸದ ಕೋಟ ಮನವಿ ಮಾಡಿದರು.
ಸಂಸದ ಕೋಟ ಬೇಡಿಕೆಗೆ ಸ್ಪಂದಿಸಿದ ಸೋಮಣ್ಣ, ಕೂಡಲೇ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರೈಲ್ವೆ ಇಲಾಖೆ ಅಧಿಕಾರಿಗಳಾದ ನವೀನಕುಮಾರ್ ಪರಶುರಾಮ, ಹಿತೇಂದ್ರ ಮಲ್ಹೋತ್ರ, ನೀರಜಕುಮಾರ್, ಸಂಜೀವ್ ಇತರರು ಉಪಸ್ಥಿತರಿದ್ದರು.