ಕರಾವಳಿ ಜಿಲ್ಲೆಯಲ್ಲಿ ಮರಳುಗಾರಿಕೆಗೆ ಅವಕಾಶ ನೀಡಿ...

MP Kota 1
Published on

ಕೇಂದ್ರಕ್ಕೆ ಸಚಿವ ಕೋಟ, ಶಾಸಕ ಯಶ್​ಪಾಲ್​ ಮನವಿ

ಸಿಆರ್​ಝಡ್​ ನಿಯಮ ಸಡಿಲಿಕೆಗೆ ವಿಶೇಷ ಚರ್ಚೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸಿಆರ್​ಝಡ್​ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ಅವಕಾಶ ನೀಡಲು ವಿಶೇಷ ಕ್ರಮ ವಹಿಸುವಂತೆ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಅವರು ಕೇಂದ್ರದ ಪರಿಸರ, ಅರಣ್ಯ ಸಚಿವ ಭುಪೇಂದ್ರ ಯಾದವ್​ ಅವರಿಗೆ ಮನವಿ ಸಲ್ಲಿಸಿದರು.

ದೆಹಲಿಯಲ್ಲಿ ಜುಲೈ 7ರಂದು ಕೇಂದ್ರ ಸಚಿವ ಹಾಗೂ ಸಚಿವಾಲಯದ ಜಂಟಿ ಕಾರ್ಯದರ್ಶಿ ತನ್ಮಯಕುಮಾರ್​ ಅವರನ್ನು ಭೇಟಿಯಾಗಿ ಮರಳುಗಾರಿಕೆಗೆ ಅನುಮತಿ ನೀಡುವ ಬಗ್ಗೆ ಚರ್ಚೆ ನಡೆಸಿದರು.

ನಿರ್ಮಾಣ ಕ್ಷೇತ್ರಕ್ಕೆ ಸಮಸ್ಯೆ

MP Kota 2
ಸಿಆರ್​ಝಡ್​ ಅಧಿಸೂಚನೆಯ ಪ್ರಕಾರ ಕರಾವಳಿ ಜಿಲ್ಲೆಯ ಈ ವ್ಯಾಪ್ತಿಯಲ್ಲಿ ಮರಳುಗಾರಿಕೆ ಸಂಪೂರ್ಣ ನಿಷೇಧವಾಗಿದೆ. ಅದರಿಂದ ಕಟ್ಟಡ ನಿರ್ಮಾಣಕ್ಕೆ ಸಕಾಲಕ್ಕೆ ಮರಳು ಸಿಗದೆ ಗಂಭೀರ ಸಮಸ್ಯೆ ಉಂಟಾಗುತ್ತಿದೆ. ಈ ವಿಚಾರವಾಗಿ ಮೂರೂ ಜಿಲ್ಲೆಗಳ ಜಿಲ್ಲಾಡಳಿತದಿಂದ ಈಗಾಗಲೇ ಶಿಫಾರಸಿನೊಂದಿಗೆ ಮನವಿ ಸಲ್ಲಿಸಲಾಗಿದೆ. ಸಿಆರ್​ಝಡ್​ ಕರಡು ಅಧಿಸೂಚನೆಯಲ್ಲಿನ ಅಗತ್ಯ ತಿದ್ದುಪಡಿ ಅಂಗೀಕರಿಸಿದರೆ ಈ ವ್ಯಾಪ್ತಿಯಲ್ಲೂ ಸಹ ಮರಳುಗಾರಿಕೆಗೆ ಅನುಮತಿ ಪಡೆಯಲು ಸಾಧ್ಯವಾಗಲಿದೆ ಎಂದು ಸಂಸದ ಕೋಟ ತಿಳಿಸಿದರು.

ರಾಜ್ಯ ಸರ್ಕಾರದಿಂದ ಪ್ರಸ್ತಾವನೆ

ಈಗಾಗಲೇ ಕೆಲವು ರಾಜ್ಯಗಳಲ್ಲಿ ಬದಲಾವಣೆ ಮಾಡಿಕೊಂಡಿದ್ದರಿಂದ ಸ್ಥಳೀಯರಿಗೆ ಅನುಕೂಲವಾಗಿದೆ. ಆ ನಿಟ್ಟಿನಲ್ಲಿ ಕರಾವಳಿ ಭಾಗದ ಜಿಲ್ಲಾಡಳಿತವೂ ಸಹ ಅಗತ್ಯ ತಿದ್ದುಪಡಿ ಮಾಡುವಂತೆ ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದನ್ನು ರಾಷ್ಟ್ರೀಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮಂಡಿಸಿ, ಅನುಮೋದನೆ ಪಡೆದು ಮರಳುಗಾರಿಕೆಗೆ ಅವಕಾಶ ನೀಡುವಂತೆ ಸಂಸದ ಕೋಟ ಸಚಿವರಿಗೆ ಮನವಿ ಮಾಡಿದರು.

ಸಿಆರ್​ಝಡ್​ ವಲಯದಲ್ಲಿ ಮರಳುಗಾರಿಕೆ ನಿಷೇಧದಿಂದ ಕರಾವಳಿ ಜಿಲ್ಲೆಯ ಆರ್ಥಿಕ ವ್ಯವಸ್ಥೆಗೆ ಹಿನ್ನಡೆಯಾಗುತ್ತಿದೆ. ಮರಳು ಕೊರತೆಯಿಂದ ಕಟ್ಟಡ ನಿರ್ಮಾಣ ವಲಯದ ಕಾರ್ಮಿಕರು, ಟೆಂಪೋ, ಲಾರಿ ಮಾಲೀಕರು ಹಾಗೂ ಮನೆ ಕಟ್ಟಿಕೊಳ್ಳಬೇಕೆಂಬ ಜನಸಾಮಾನ್ಯರಿಗೂ ಸಮಸ್ಯೆ ಆಗುತ್ತಿದೆ. ಶಾಶ್ವತ ಪರಿಹಾರ ಒದಗಿಸಲು ಕಾನೂನಿನಲ್ಲಿ ತಿದ್ದುಪಡಿ ಮಾಡಿ ಸಹಕಾರ ನೀಡುವಂತೆ ಸಚಿವ ಭುಪೇಂದ್ರ ಯಾದವ್​ ಅವರಿಗೆ ವಿನಂತಿಸಿದ್ದೇವೆ. | ಯಶ್​ಪಾಲ್​ ಸುವರ್ಣ. ಉಡುಪಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net