

ಉಡುಪಿ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಏನಾಗುತ್ತಿದೆ ಎನ್ನುವುದೇ ಅರ್ಥವಾಗುತ್ತಿಲ್ಲ. ಈ ಹಿಂದೆ ಪರೀಕ್ಷೆ ನಡೆಯುವಾಗ ವಿದ್ಯಾರ್ಥಿನಿಯರ ಕಿವಿಯೋಲೆ, ಮಹಿಳೆಯರ ಮಾಂಗಲ್ಯ ತೆಗೆಸಿರುವ ಕುರಿತು ಒಂದಿಷ್ಟು ಗಲಾಟೆ, ವಿವಾದ ನಡೆದಿತ್ತು. ಈಗ ವಿದ್ಯಾರ್ಥಿಗಳು ಧರಿಸಿರುವ ಜನಿವಾರ ತೆಗೆಸುತ್ತಿದ್ದಾರೆ. ಸರ್ಕಾರ, ಸಚಿವರು ಹಾಗೂ ಉನ್ನತ ಅಧಿಕಾರಿಗಳಿಗೆ ಗೊತ್ತಿಲ್ಲದೆ ಪರೀಕ್ಷೆ ಕೇಂದ್ರದಲ್ಲಿರುವ ಸಾಮಾನ್ಯ ಸಿಬ್ಬಂದಿ ಈ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ.
ಕೇವಲ ಬ್ರಾಹ್ಮಣರಷ್ಟೇ ಜನಿವಾರ ಧರಿಸುವುದಿಲ್ಲ. ಗೌಡ ಸಾರಸ್ವತ, ವಿಶ್ವಕರ್ಮ ಸಮಾಜದವರೂ ಧರಿಸುತ್ತಾರೆ. ಒಂದಿಷ್ಟು ಜನ ಜನಿವಾರವನ್ನು ಪವಿತ್ರ ಎಂದು ಭಾವಿಸಿದ್ದಾರೆ. ಅಂತಹವರ ಮನಸ್ಸು ನೋಯಿಸಿ, ಅವರ ಆಚಾರ-ವಿಚಾರಗಳಿಗೆ ಧಕ್ಕೆ ತರುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಮಂತ್ರಿಗಳಿಗೆ ಈ ವಿಚಾರ ಗೊತ್ತಿಲ್ಲದಿದ್ದಲ್ಲಿ ತಪ್ಪು ಮಾಡಿದ ಅಧಿಕಾರಿ, ಸಿಬ್ಬಂದಿಗೆ ತಕ್ಕ ಶಿಕ್ಷೆ ನೀಡಬೇಕು. ಒಂದು ಧರ್ಮದವರು ಏನಾದರೂ ಧರಿಸಬಹುದು, ಇನ್ನೊಂದು ಧರ್ಮದವರೂ ಏನೂ ಧರಿಸಬಾರದು ಎನ್ನುವುದು ನ್ಯಾಯಸಮ್ಮತವಲ್ಲ. ಇಂತಹ ನಿರ್ಧಾರಗಳನ್ನು ಕೈಗೊಂಡು ಒಂದು ಸಮುದಾಯದ ಮೇಲೆ ಸರ್ಕಾರ ದಬ್ಬಾಳಿಕೆ ಮಾಡಬಾರದು ಎನ್ನುವುದು ನನ್ನ ಆಗ್ರಹವಾಗಿದೆ ಎಂದು ಕೋಟ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.