ಉಡುಪಿ ಜಿಲ್ಲೆಯಲ್ಲಿ ಮೊಂತಿ ಫೆಸ್ತ್ ಸಂಭ್ರಮ

1234
Published on

ಉಡುಪಿ: ಜಿಲ್ಲೆಯಾದ್ಯಂತ ಗುರುವಾರ ಕ್ರೆಸ್ತ ಬಾಂಧವರು ಕನ್ಯಾಮರಿಯಮ್ಮ ಜನ್ಮದಿನವಾದ ಮೊಂತಿ ಫೆಸ್ತ್ ಸಂಭ್ರಮದಿಂದ ಆಚರಿಸಿದರು.

ಪುಟ್ಟ ಮಕ್ಕಳು ಕನ್ಯಾ ಮರಿಯಮ್ಮನವರ ಮೂರ್ತಿಗೆ ಹೂಗಳನ್ನು ಸಮರ್ಪಿಸಿದರು. ಎಲ್ಲ ಚರ್ಚುಗಳಲ್ಲಿ ಧರ್ಮಗುರುಗಳು ಊರಿನ ಗುರಿಕಾರರು ಹೊಲಗಳಿಂದ ಆರಿಸಿ ತಂದ ಭತ್ತದ ತೆನೆಯನ್ನು ಮೆರವಣಿಗೆಯಲ್ಲಿ ಚರ್ಚಿನ ಒಳಗೆ ಕೊಂಡೊಯ್ದು, ಪವಿತ್ರ ಬಲಿಪೂಜೆ ನಡೆಸಿದರು. ಪೂಜೆಯ ಬಳಿಕ ಆಶೀರ್ವದಿಸಿದ ಭತ್ತದ ತೆನೆಗಳನ್ನು ಪ್ರತಿ ಕುಟುಂಬಕ್ಕೆ ವಿತರಿಸಲಾಯಿತು.

ಉಡುಪಿ ಕ್ರೆಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ, ಮಲ್ಪೆ ಸಮೀಪದ ತೊಟ್ಟಂ ಸಂತ ಅನ್ನಮ್ಮ ದೇವಾಲಯದಲ್ಲಿ ಹಬ್ಬದ ಬಲಿಪೂಜೆ ಅರ್ಪಿಸಿ, ಹಬ್ಬದ ಸಂದೇಶ ನೀಡಿದರು. ಈ ವೇಳೆ ಚರ್ಚಿನ ಧರ್ಮಗುರು ವಂ.ಡೆನಿಸ್ ಡೆಸಾ ಉಪಸ್ಥಿತರಿದ್ದರು. ಶೋಕಮಾತಾ ಇಗರ್ಜಿಯಲ್ಲಿ ಜರುಗಿದ ಧಾರ್ಮಿಕ ಕಾರ್ಯಕ್ರಮದಲ್ಲಿ ಚರ್ಚಿನ ಪ್ರಧಾನ ಧರ್ಮಗುರು ವಂ. ಚಾರ್ಲ್ಸ್ ಮಿನೇಜಸ್ ನೇತೃತ್ವ ವಹಿಸಿದ್ದರು.
ಕುಂದಾಪುರದ ಹೋಲಿ ರೋಸರಿ ಚರ್ಚಿನಲ್ಲಿ ವಂ.ಸ್ಟ್ಯಾನಿ ತಾವ್ರೋ, ಶಿರ್ವದ ಆರೋಗ್ಯ ಮಾತಾ ಚರ್ಚಿನಲ್ಲಿ ವಂ.ಡಾ. ಲೆಸ್ಲಿ ಡಿಸೋಜಾ, ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ನಲ್ಲಿ ವಂ.ವಲೇರಿಯನ್ ಮೆಂಡೊನ್ಸಾ, ಕಾರ್ಕಳ ಅತ್ತೂರು ಸಂತ ಲಾರೆನ್ಸ್ ಬಾಸಿಲಿಕಾದಲ್ಲಿ ವಂ. ಆಲ್ಬನ್ ಡಿಸೋಜಾ ನೇತೃತ್ವದಲ್ಲಿ ಮೋಂತಿ ಫೆಸ್ತ್ ಆಚರಣೆ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net