

ಉಡುಪಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನ್ಮದಿನಾಚರಣೆ ಅಂಗವಾಗಿ ಶನಿವಾರ ಕಡಿಯಾಳಿ ಶ್ರೀನಿವಾಸ ಹೋಟೆಲ್ನಲ್ಲಿ ಸಾರ್ವಜನಿಕರಿಗೆ ಉಚಿತ ಪಾಯಸ ವಿತರಣೆ ನಡೆಯಿತು. ಮಾಲಕ ನರಸಿಂಹ ಕಿಣಿ ಅವರು ದಾರಿಹೋಕರು, ಬಸ್ ಚಾಲಕರು, ರಿಕ್ಷಾ ಚಾಲಕರು, ಸಾರ್ವಜನಿಕರಿಗೆ ಸೇರಿ ಸುಮಾರು 800 ಮಂದಿಗೆ ಪಾಯಸ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ವಿನಯ ಕಿಣಿ, ಮಲ್ಪೆ ವಲ್ಲಭ ಭಟ್, ಜಯಂತ್ ಕುಂದರ್ ಸಹಕರಿಸಿದರು.
ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಪ್ರಧಾನಿ ಜನ್ಮದಿನದ ಪ್ರಯುಕ್ತ ಬಿಜೆಪಿ ಯುವ ಮೋರ್ಚಾ ವತಿಯಿಂದ ಕೆಎಂಸಿ ಮಣಿಪಾಲದಲ್ಲಿ ರಕ್ತ ನಿಧಿ ವಿಭಾಗ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಯಿತು. ಶಾಸಕ ಕೆ.ರಘುಪತಿ ಭಟ್ ಉದ್ಘಾಟಿಸಿದರು. ನಗರಾಧ್ಯಕ್ಷ ಮಹೇಶ್ ಠಾಕೂರ್, ನಗರ ಪ್ರಧಾನ ಕಾರ್ಯದರ್ಶಿ ದಿನೇಶ್ ಅಮೀನ್, ಜಿಲ್ಲಾ ಬಿಜೆಪಿ ವಕ್ತಾರ ಕೆ.ರಾಘವೇಂದ್ರ ಕಿಣಿ, ಸಹ ವಕ್ತಾರ ಪ್ರತಾಪ್ ಚಂದ್ರ ಶೆಟ್ಟಿ , ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ, ಸತೀಶ್ ಸಾಲಿಯಾನ್, ಯುವ ಮೋರ್ಚಾ ನಗರ ಅಧ್ಯಕ್ಷರಾದ ರೋಷನ್ ಶೆಟ್ಟಿ, ಪ್ರಧಾನ ಪ್ರಧಾನ ಕಾರ್ಯದರ್ಶಿ ಸುಶಾಂತ್ ಪೂಜಾರಿ ಉಪಸ್ಥಿತರಿದ್ದರು.
ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ
ಮೋದಿ ಜನ್ಮದಿನ ಅಂಗವಾಗಿ ಕಡಿಯಾಳಿ ಯು. ಕಮಲಾ ಬಾಯಿ ಪ್ರೌಢಶಾಲಾ ಮಕ್ಕಳಿಗೆ ಉಡುಪಿ ನಗರ ಬಿಜೆಪಿ ವತಿಯಿಂದ ನೀಡಲಾದ ಉಚಿತ ಪುಸ್ತಕ ಹಾಗೂ ಕಂಪಾಸ್ ಬಾಕ್ಸ್‌ಗಳನ್ನು ಶಾಸಕ ಕೆ. ರಘುಪತಿ ಭಟ್ ವಿತರಿಸಿದರು.
ಅಂಗನವಾಡಿ ದತ್ತು ಸ್ವೀಕಾರ
ಸೇವಾ ಪ್ರಾಕ್ಷಿಕ ಆದರ್ಶ ಅಂಗನವಾಡಿ ಅಭಿಯಾನ ಅಂಗವಾಗಿ ಮಹಿಳಾ ಮೋರ್ಚಾ ವತಿಯಿಂದ ಅಂಗನವಾಡಿ ದತ್ತು ಸ್ವೀಕಾರ ಸಮಾರಂಭ ಶನಿವಾರ ನಗರದ ಬನ್ನಂಜೆ ಶಿರಿಬೀಡು ಸರಸ್ವತಿ ಶಾಲೆಯ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು. ಪ್ರಧಾನಿ ಹುಟ್ಟು ಹಬ್ಬದ ಪ್ರಯುಕ್ತ ಹಣ್ಣು ಹಂಪಲು ಹಾಗೂ ಬರವಣಿಗೆ ಸಾಮಗ್ರಿಗಳು ವಿತರಿಸಲಾಯಿತು. ಈ ಅಂಗನವಾಡಿ ಕೇಂದ್ರಕ್ಕೆ ಸಂಬಂಧ ಪಟ್ಟ ಕುಂದು ಕೊರತೆಗಳ ಮನವಿ ಸ್ವೀಕರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರ ಮಹಿಳಾ ಮೋರ್ಚಾದ ಅಧ್ಯಕ್ಷೆ ಸರೋಜಾ ಶೆಟ್ಟಿಗಾರ್ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸುಧಾ ಪೈ ಸ್ವಾಗತಿಸಿದರು. ನಗರ ಬಿಜೆಪಿ ಉಪಾಧ್ಯಕ್ಷೆ ಪ್ರಭಾ ಶೆಟ್ಟಿ, ಕಾರ್ಯದರ್ಶಿ ಆನಂದ್ ಸುವರ್ಣ, ನಗರದ ಬಿಜೆಪಿಯ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕಿಶೋರ್ ಕರಂಬಳ್ಳಿ, ಪ್ರಕೋಷ್ಟದ ಸಂಚಾಲಕಿ ಮಂಜುಳಾ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.