

ವಿಜಯವಾಣಿ ಸುದ್ದಿಜಾಲ ಉಡುಪಿ
ನಾಡಿನ ಛಾಯಾಗ್ರಾಹಕರ ಬಹು ವರ್ಷಗಳ ಬೇಡಿಕೆಯಂತೆ ರಾಜ್ಯದಲ್ಲಿ ಛಾಯಾಗ್ರಹಣ ಅಕಾಡೆಮಿ ಆರಂಭಿಸಿ, ಆ ವೃತ್ತಿಗೆ ಮಾನ್ಯತೆ ಒದಗಿಸಿ ಛಾಯಾಗ್ರಹಣ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಸಹಕಾರ ನೀಡಬೇಕು ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜುಲೈ 29ರಂದು ಪತ್ರ ಬರೆದಿದ್ದಾರೆ.
ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಈಗಾಗಲೇ ಸರ್ಕಾರ ಛಾಯಾಗ್ರಹಣ ಅಕಾಡೆಮಿ ಸ್ಥಾಪಿಸಿದೆ. ನಮ್ಮ ರಾಜ್ಯದ ಛಾಯಾಗ್ರಹಣ ಕ್ಷೇತ್ರದಲ್ಲಿಯೂ ಪ್ರತಿಭಾವಂತರಿದ್ದಾರೆ. ಆದರೆ, ಅವರಿಗಾಗಿ ಸರ್ಕಾರಿ ಮಾನ್ಯತೆಯ ಛಾಯಾಗ್ರಹಣ ಅಕಾಡೆಮಿ ಇಲ್ಲವಾಗಿದೆ ಎಂದು ಯಶ್ಪಾಲ್ ಪತ್ರದಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಅಕಾಡೆಮಿ ಸ್ಥಾಪನೆಯಾದರೆ ವೃತ್ತಿಗೆ ಮಾನ್ಯತೆ, ಸಾಂಸ್ಕೃತಿಕ ಮತ್ತು ಐತಿಹಾಸಿಕ ದಾಖಲೆಗಳ ಸಂರಕ್ಷಣೆ, ಛಾಯಾಗ್ರಾಹಕರಿಗೆ ತಾಂತ್ರಿಕ ಕೌಶಲ ಕಾರ್ಯಕ್ರಮ, ಹಿರಿಯರಿಗೆ ಪಿಂಚಣಿ, ವಿಮೆ, ಪ್ರಶಸ್ತಿ, ಪ್ರವಾಸೋದ್ಯಮ ಚಟುವಟಿಕೆಗೆ ಪ್ರೋತ್ಸಾಹ ನೀಡಬಹುದಾಗಿದೆ. ಯುವಸಬಲೀಕರಣಕ್ಕೆ ಪೂರಕವಾಗಿಯೂ ಶಕ್ತಿ ನೀಡಬಹುದಾಗಿದೆ. ರಾಜ್ಯದಲ್ಲಿ ಅಕಾಡೆಮಿ ಸ್ಥಾಪಿಸುವಂತೆ ಸಮಸ್ತ ಛಾಯಾಗ್ರಾಹಕರ ಪರವಾಗಿ ಮನವಿ ಮಾಡುವುದಾಗಿ ಯಶ್ಪಾಲ್ ಪತ್ರದಲ್ಲಿ ತಿಳಿಸಿದ್ದಾರೆ.