ಸಂಪೂರ್ಣ ಹಾನಿಯಾದ ಮನೆಗೆ 5 ಲಕ್ಷ ರೂ. ಪರಿಹಾರ ನೀಡಿ

UDP-5-5-Rain
ಮಳೆಯಿಂದಾಗಿ ಹಾನಿ ಉಂಟಾದ ಕರ್ಜೆ ಗ್ರಾಪಂ ವ್ಯಾಪ್ತಿಯ ಕುರ್ಪಾಡಿ ಗ್ರಾಮಕ್ಕೆ ಶಾಸಕ ಯಶ್​ಪಾಲ್​ ಸುವರ್ಣ ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲಿಸಿದರು. ಇನಕರ ಶೆಟ್ಟಿ, ಸೌಮ್ಯಾ, ರವಿರಾಜ್​, ರಾಜೀವ್​ ಕುಲಾಲ್​, ನವೀನ್​ ಪುತ್ರನ್​ ಇತರರಿದ್ದರು.
Published on

ಶಾಸಕ ಯಶ್​ಪಾ ಸುವರ್ಣ ಆಗ್ರಹ | ಹಾನಿಯಾದ ಪ್ರದೇಶಗಳಿಗೆ ಭೇಟಿ

ಉಡುಪಿ: ಕರ್ಜೆ ಗ್ರಾಪಂ ವ್ಯಾಪ್ತಿಯ ಕುರ್ಪಾಡಿ ಭಾಗದಲ್ಲಿ ಬುಧವಾರ ಹಾಗೂ ಗುರುವಾರ ಭಾರಿ ಗಾಳಿ-ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಅಧಿಕಾರಿಗಳೊಂದಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.

ಮಳೆಯಿಂದ ಹಾನಿಗೀಡಾದ ಮನೆ, ತೋಟ ಹಾಗೂ ಕೃಷಿಯ ಬಗ್ಗೆ ಸಮರ್ಪಕ ಸರ್ವೇ ನಡೆಸಿ ವರದಿ ಕೊಡಬೇಕು. ಸಂತ್ರಸ್ತರಿಗೆ ಗರಿಷ್ಠ ಪರಿಹಾರ ಸಿಗುವಂತಾಗಬೇಕು ಎಂದು ಕಂದಾಯ ಅಧಿಕಾರಿಗಳಿಗೆ ಸೂಚಿಸಿದರು.

ಸಂಪೂರ್ಣ ಹಾನಿಯಾದ ಮನೆಗಳ ಮರು ನಿಮಾರ್ಣಕ್ಕೆ ಹಿಂದಿನ ಬಿಜೆಪಿ ಸರ್ಕಾರ 5 ಲಕ್ಷ ರೂ. ಪರಿಹಾರ ನೀಡುತ್ತಿತ್ತು. ಅದನ್ನು ಇಂದಿನ ಸರ್ಕಾರ 1.50 ಲಕ್ಷ ರೂ.ಗೆ ಇಳಿಕೆ ಮಾಡಿದೆ. ಕೂಡಲೇ ಸರ್ಕಾರ ಆ ಮೊತ್ತವನ್ನು 5 ಲಕ್ಷ ರೂ.ಗೆ ಮತ್ತೆ ಏರಿಕೆ ಮಾಡಬೇಕು. ಅಲ್ಲದೆ, ತುರ್ತು ಸಂದರ್ಭದಲ್ಲಿ 25 ಸಾವಿರ ರೂ.ವನ್ನು ಸ್ಥಳದಲ್ಲಿಯೇ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.

ಅಧಿಕಾರಿಗಳಿಗೆ ಅಭಿನಂದನೆ

ಘಟನೆ ಸಂಭವಿಸಿದ ಕೂಡಲೇ ರಾತ್ರೋರಾತ್ರಿ ತಕ್ಷಣ ಪರಿಹಾರ ಕಾರ್ಯಾಚರಣೆ ನಡೆಸಿ ಸಹಕರಿಸಿದ ಕಂದಾಯ, ಅರಣ್ಯ, ಅಗ್ನಿಶಾಮಕ, ಮೆಸ್ಕಾಂ, ಪೊಲೀಸ್​ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳಿಯ ಸಂಘ-ಸಂಸ್ಥೆಗಳ ಸದಸ್ಯರಿಗೆ ಯಶ್​ಪಾಲ್​ ಇದೇವೇಳೆ ಅಭಿನಂದನೆ ಸಲ್ಲಿಸಿದರು.

ಕರ್ಜೆ ಗ್ರಾಪಂ ಅಧ್ಯಕ್ಷ ಇನಕರ ಶೆಟ್ಟಿ, ಗ್ರಾಮ ಲೆಕ್ಕಾಧಿಕಾರಿ ಸೌಮ್ಯಾ, ಪಿಡಿಒ ರವಿರಾಜ್​, ಬಿಜೆಪಿ ಮಂಡಲ ಅಧ್ಯಕ್ಷ ರಾಜೀವ್​ ಕುಲಾಲ್​, ಕಾರ್ಯದರ್ಶಿ ನವೀನ್​ ಪುತ್ರನ್​, ಪಕ್ಷದ ಪ್ರಮುಖರಾದ ಆದರ್ಶ ಶೆಟ್ಟಿ ಕೆಂಜೂರು, ವಿನುತ್​ ಶೆಟ್ಟಿ, ಸುಧಾಕರ ಸುವರ್ಣ, ರಘು ನಾಯ್ಕ್​, ಉಪೇಂದ್ರ, ಆಶಾ, ಅಕ್ಷಯ್​, ಮಣಿಕಂಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net