ಹಿಂದು ಕಾರ್ಯಕರ್ತರ ದಮನಕ್ಕೆ ಕಾಂಗ್ರೆಸ್​ ಹುನ್ನಾರ

Yashpal
Published on

ಶಾಸಕ ಯಶ್​ಪಾಲ್​ ಸುವರ್ಣ ಆರೋಪ

ಆ್ಯಂಟಿ ಕಮ್ಯುನಲ್​ ಫೋರ್ಸ್​ಗೆ ವಿರೋಧ

ವಿಜಯವಾಣಿ ಸುದ್ದಿಜಾಲ ಉಡುಪಿ

ಕರಾವಳಿ ಜಿಲ್ಲೆಯಲ್ಲಿ ಕಾಂಗ್ರೆಸ್​ ಸರ್ಕಾರ ಆ್ಯಂಟಿ ಕಮ್ಯುನಲ್​ ಫೋರ್ಸ್​ ಆರಂಭಿಸುವ ಮೂಲಕ ಹಿಂದು ಕಾರ್ಯಕರ್ತರನ್ನೇ ಗುರಿಯಾಗಿಸಿ, ಅವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ದಮನಿಸುವ ಹುನ್ನಾರ ಮಾಡಿದೆ ಎಂದು ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಗೃಹ ಸಚಿವ ಪರಮೇಶ್ವರ ಅವರು ಮುಸ್ಲಿಂ ಸಮುದಾಯದೊಂದಿಗೆ ಶನಿವಾರ ಸಭೆ ನಡೆಸಿದ್ದು, ಅವರ ಒತ್ತಡಕ್ಕೆ ಮಣಿದು ಆ್ಯಂಟಿ ಕಮ್ಯುನಲ್​ ಫೋರ್ಸ್​ ರಚನೆಗೆ ಮುಂದಾಗಿದ್ದಾರೆ. ತನ್ಮೂಲಕ ಮತ್ತೆ ಮತೀಯವಾದಿ ಶಕ್ತಿಗಳ ಓಲೈಕೆಗೆ ಕಾಂಗ್ರೆಸ್​ ಸರ್ಕಾರ ಮುಂದಾಗಿದೆ ಎಂದು ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಗಳ ಅಭಿವೃದ್ಧಿಗೆ ಕೊಳ್ಳಿ

Yashpal 2
ಯಶ್​ಪಾಲ್ ಸುವರ್ಣ

ಜಿಲ್ಲೆಗೆ ಆಗಮಿಸಿದ್ದ ಗೃಹ ಸಚಿವರು ಜಿಲ್ಲೆಯ ಎಲ್ಲ ಶಾಸಕರನ್ನೂ ವಿಶ್ವಾಸಕ್ಕೆ ಪಡೆದು ಶಾಂತಿ-ಸುವ್ಯವಸ್ಥೆಯ ಬಗ್ಗೆ ಚರ್ಚಿಸುವ ಕನಿಷ್ಠ ಸೌಜನ್ಯ ತೋರಿಲ್ಲ. ಈ ಹಿಂದೆ ಕರಾವಳಿ ಜಿಲ್ಲೆಯಲ್ಲಿ ಮಾದಕ ದ್ರವ್ಯ ಜಾಲ ಮಟ್ಟಹಾಕಲು ಪೊಲೀಸ್​ ಇಲಾಖೆಯಲ್ಲಿ ಡ್ರಗ್ಸ್​ ನಿಯಂತ್ರಣ ವಿಶೇಷ ಘಟಕ ರಚಿಸುವಂತೆ ಮನವಿ ನೀಡಿದ್ದರೂ ಸ್ಪಂದಿಸದ ಕಾಂಗ್ರೆಸ್​ ಸರ್ಕಾರ ಇದೀಗ ಹಿಂದು ಕಾರ್ಯಕರ್ತರನ್ನು ಹಿಮ್ಮೆಟ್ಟಿಸಲು ಆ್ಯಂಟಿ ಕಮ್ಯುನಲ್​ ಫೋರ್ಸ್​ ರಚನೆಗೆ ತುದಿಗಾಲಲ್ಲಿ ನಿಂತಿದೆ. ಇದರಿಂದ ಕರಾವಳಿ ಜಿಲ್ಲೆಗಳು ರಾಷ್ಟ್ರಮಟ್ಟದಲ್ಲಿ ಕೋಮು ಸೂಕ್ಷ್ಮ ಪ್ರದೇಶ ಎಂದು ಬಿಂಬಿತಗೊಂಡು, ಇಲ್ಲಿನ ಆರ್ಥಿಕ-ಸಾಮಾಜಿಕ ಅಭಿವೃದ್ಧಿಗೆ ಕೊಳ್ಳಿ ಇಡಲು ಕಾಂಗ್ರೆಸ್​ ಸರ್ಕಾರ ಮುಂದಾಗಿದೆ ಎಂದು ದೂರಿದ್ದಾರೆ.

ಖಾದರ್​ ರಾಜೀನಾಮೆ ನೀಡಲಿ

ಸ್ಪೀಕರ್​ ಯು.ಟಿ. ಖಾದರ್​ ಅವರು ತನಿಖೆ ನಡೆಯುವ ಸಂದರ್ಭದಲ್ಲಿಯೇ ಈ ಹತ್ಯೆಯಲ್ಲಿ ಫಾಸಿಲ್​ ಕುಟುಂಬಸ್ಥರ ಕೈವಾಡ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಇದೀಗ ಫಾಸಿಲ್​ ಸಹೋದರನೇ ಸುಹಾಸ್​ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ತನಿಖೆಯ ಮೇಲೆ ಪ್ರಭಾವ ಬೀರಿದ ಖಾದರ್​ ಅವರು ತಕ್ಷಣ ಸ್ಪೀಕರ್​ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಯಶ್​ಪಾಲ್​ ಆಗ್ರಹಿಸಿದ್ದಾರೆ.

ಕಾಂಗ್ರೆಸ್​ನ ಕೈಗೊಂಬೆ

ಗೃಹ ಸಚಿವರ ಸಭೆಯಲ್ಲಿ ಮುಸ್ಲಿಂ ಮುಖಂಡರು ಮೇಜು ಗುದ್ದಿ ಉದ್ಧಟತನ ಮೆರೆದರೂ ಪೊಲೀಸ್​ ಇಲಾಖೆ ಮೌನಕ್ಕೆ ಶರಣಾಗಿತ್ತು. ಕಾಂಗ್ರೆಸ್​ನ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್​ ಇಲಾಖೆಯ ಮೇಲೆ ಜಿಲ್ಲೆಯ ಜನತೆಗೆ ಯಾವುದೇ ವಿಶ್ವಾಸ ಉಳಿದಿಲ್ಲ. ಸುಹಾಸ್​ ಕೊಲೆ ಪ್ರಕರಣಕ್ಕೆ ಸಹಕಾರ ನೀಡಿದ ಬುರ್ಕಾಧಾರಿ ಮಹಿಳೆ, ಹಣಕಾಸು ಸಹಕಾರ ನೀಡಿದ ವ್ಯಕ್ತಿಗಳು ಹಾಗೂ ಆರೋಪಿಗಳಿಗೆ ನಿಷೇಧಿತ ಸಂಘಟನೆಯೊಂದಿಗೆ ಸಂಪರ್ಕ ಇದೆ. ಹೀಗಾಗಿ ಸುಹಾಸ್​ ಹತ್ಯೆಯ ಪ್ರಕರಣವನ್ನು ಎನ್​ಐಎ ತನಿಖೆಗೆ ರಾಜ್ಯ ಸರ್ಕಾರ ಹಸ್ತಾಂತರಿಸಬೇಕು ಎಂದು ಯಶ್​ಪಾಲ್​ ಆಗ್ರಹಿಸಿದ್ದಾರೆ.

ಮಂಗಳೂರಿನಲ್ಲಿ ಎನ್​ಐಎ ಘಟಕ ಸ್ಥಾಪನೆಯಾಗಲಿ 

Prathwiraj
ಪ್ರಥ್ವಿರಾಜ ಶೆಟ್ಟಿ

ಕೇಂದ್ರ ಸರ್ಕಾರ ಪಶ್ಚಿಮ ಕರಾವಳಿಯಲ್ಲಿ ಅದರಲ್ಲೂ ಮಂಗಳೂರಿನಲ್ಲಿ ಎನ್​ಐಎ ಘಟಕ ಆರಂಭಿಸಬೇಕು ಎಂದು ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರಥ್ವಿರಾಜ ಶೆಟ್ಟಿ ಬಿಲ್ಲಾಡಿ ಆಗ್ರಹಿಸಿದ್ದಾರೆ. ದೇಶದ ಪಶ್ಚಿಮ ಕರಾವಳಿಯು ರಾಷ್ಟ್ರವಿರೋಧಿ ಚಟುವಟಿಕೆಯ ತಾಣವಾಗುತ್ತಿದೆ. ಕೇರಳ ಮತ್ತು ಭಟ್ಕಳದಲ್ಲಿ ಈಗಾಗಲೇ ಭಯೋತ್ಪಾದಕರ ದೊಡ್ಡಜಾಲ ಪತ್ತೆಯಾಗಿದೆ. ಮಂಗಳೂರಿನಲ್ಲಿ ಹಿಂದು ಕಾರ್ಯಕರ್ತ ಸುಹಾಸ್​ ಶೆಟ್ಟಿ ಹತ್ಯೆಯ ಹಿಂದೆಯೂ ದೇಶದ್ರೋಹಿ ಗುಂಪುಗಳ ಅಂತಾರಾಷ್ಟ್ರೀಯ ಸ್ಲೀಪರ್​ ಸೆಲ್​ಗಳು ಕಾರ್ಯನಿರ್ವಹಿಸಿರುವುದು ಬಹುತೇಕ ಖಚಿತವಾಗಿದೆ. ಕರಾವಳಿಯಲ್ಲಿ ನಡೆಯುವ ಎಲ್ಲ ಹಿಂದು ಕಾರ್ಯಕರ್ತರ ಕೊಲೆಗಳ ಸಂಚು ಕೇರಳದಿಂದಲೇ ನಡೆಯುತ್ತಿದೆ. ಹೀಗಾಗಿ ಮಂಗಳೂರಿನಲ್ಲಿ ಎನ್​ಐಎ ಘಟಕ ಸ್ಥಾಪಿಸಬೇಕೆಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net