ಸ್ಟಾರ್ಟ್​ಅಪ್​ ಕಂಪನಿಗಳಿಗೆ ವಿಶೇಷ ಪ್ರೋತ್ಸಾಹ ನೀಡಿ...

Yash Nirmala
Published on

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ಗೆ ಶಾಸಕ ಯಶ್​ಪಾಲ್​ ಮನವಿ

ವಿಜಯವಾಣಿ ಸುದ್ದಿಜಾಲ ಉಡುಪಿ

ಉಡುಪಿ-ಮಂಗಳೂರು ಜಿಲ್ಲೆಯಲ್ಲಿ ಅನೇಕ ಸ್ಟಾರ್ಟ್​ಅಪ್​ ಕಂಪನಿಗಳು ಪ್ರಾರಂಭಗೊಂಡಿದೆ. ಅವುಗಳ ಬೆಳವಣಿಗೆಗೆ ಅನುಕೂಲಕರ ನಿಯಮ ರೂಪಿಸಿ, ಕೇಂದ್ರ ಬಜೆಟ್​ನಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸ್ಟಾರ್ಟ್​ಅಪ್​ ಕಂಪನಿಗಳಿಗೆ ವಿಶೇಷ ಪ್ರೋತ್ಸಾಹ ನೀಡಬೇಕು ಎಂದು ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರಿಗೆ ಉಡುಪಿಯಲ್ಲಿ ಆಗಸ್ಟ್​ 9ರಂದು ಮನವಿ ನೀಡಿದರು.

Kalsanka 2
ಉಡುಪಿ-ಮಂಗಳೂರು ಭಾಗದಲ್ಲಿ 25ಕ್ಕೂ ಹೆಚ್ಚು ಇಂಜಿನಿಯರಿಂಗ್​ ಕಾಲೇಜುಗಳ ಮೂಲಕ 15 ಸಾವಿರಕ್ಕೂ ಅಧಿಕ ಇಂಜಿನಿಯರ್​ಗಳು, 150ಕ್ಕೂ ಹೆಚ್ಚು ಪದವಿ ಕಾಲೇಜುಗಳ ಮೂಲಕ 40 ಸಾವಿರಕ್ಕೂ ಅಧಿಕ ಪದವೀಧರರನ್ನು ಪ್ರತಿವರ್ಷ ಉದ್ಯೋಗ ಕ್ಷೇತ್ರಕ್ಕೆ ಒದಗಿಸುತ್ತಿವೆ. ತಲಾ 15ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳು ಹಾಗೂ ಇನ್ಕ್ಯುಬೇಷನ್​ ಸೆಂಟರ್​ ಕಾರ್ಯಾಚರಿಸುತ್ತಿವೆ. ಉತ್ತಮ ಶಿಕ್ಷಣ ವ್ಯವಸ್ಥೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದು ಎರಡೂ ಜಿಲ್ಲೆಗಳ ಶೈಕ್ಷಣಿಕ ಸಾಮರ್ಥ್ಯ ವಿವರಿಸಿದರು.

ರಾಜ್ಯದ ಕರಾವಳಿ ಪ್ರದೇಶವು ಸ್ಟಾರ್ಟ್​ಅಪ್​ಗಳಿಗೆ ಪೂರಕ ಪ್ರದೇಶವಾಗಿ ಬೆಳೆಯುತ್ತಿದೆ. ಉಡುಪಿಯ ರೋಬೋ ಸಾಫ್ಟ್​ ಟೆಕ್ನಾಲಜೀಸ್​ ಹಾಗೂ ನಿವೀಸ್​ ಸೊಲ್ಯೂಷನ್ಸ್​ ಮೊದಲಾದ ಕಂಪನಿಗಳು ಗಮನಾರ್ಹ ಪ್ರಗತಿ ಸಾಧಿಸಿದೆ. ಹೀಗಾಗಿ ಈ ಭಾಗದ ಸ್ಟಾರ್ಟ್​ಅಪ್​ ಕಂಪನಿಗಳಿಗೆ ಉತ್ತೇಜನ ನೀಡಲು ಬಜೆಟ್​ನಲ್ಲಿ ಸೂಕ್ತ ಅವಕಾಶ ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಯಶ್​ಪಾಲ್​ ಮನವಿ ಮಾಡಿದರು.

ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ ಶೆಟ್ಟಿ ಹಾಗೂ ಪಕ್ಷದ ಪ್ರಮುಖರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net