

ವಿಜಯವಾಣಿ ಸುದ್ದಿಜಾಲ ಉಡುಪಿ
ಇತ್ತೀಚೆಗೆ ಸುರಿದ ಭಾರಿ ಗಾಳಿ-ಮಳೆಗೆ ನಗರಸಭಾ ವ್ಯಾಪ್ತಿಯ ಹಲವೆಡೆ ಅಪಾರ ಪ್ರಮಾಣದಲ್ಲಿ ಸಾರ್ವಜನಿಕರ ಆಸ್ತಿ-ಪಾಸ್ತಿ ನಷ್ಟವಾಗಿದ್ದು, ರಸ್ತೆಗಳು ಹಾನಿಗೊಂಡಿವೆ. ಹೀಗಾಗಿ ಅಸಮರ್ಪಕ ಚರಂಡಿ ವ್ಯವಸ್ಥೆ ಸಹಿತ ವಿವಿಧ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ತುರ್ತು ಕಾಮಗಾರಿ ನಡೆಸಿ ಎಂದು ನಗರಸಭೆ ಅಧಿಕಾರಿಗಳಿಗೆ ಶಾಸಕ ಯಶ್ಪಾಲ್ ಸುವರ್ಣ ಸೂಚನೆ ನೀಡಿದರು.
ಉಡುಪಿಯ ನಗರಸಭೆಯಲ್ಲಿ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿ ಮಾತನಾಡಿ, ಗುಂಡಿಮಯವಾಗಿರುವ ನಗರದ ಪ್ರಮುಖ ರಸ್ತೆಗಳನ್ನು ಸರಿಪಡಿಸಿ ಸುಗಮ ಸಂಚಾರಕ್ಕೆ ಕ್ರಮ ವಹಿಸಬೇಕು ಎಂದರು.
ಮುಂದಿನ ತಿಂಗಳಿನಿಂದ ಕೃಷ್ಣಾಷ್ಟಮಿ ಸೇರಿದಂತೆ ಅನೇಕ ಹಬ್ಬಗಳು ಇದ್ದು, ಮೆರವಣಿಗೆಗಳು ನಡೆಯಲಿವೆ. ಹಬ್ಬಗಳ ಮೆರವಣಿಗೆ ಸಾಗುವ ರಸ್ತೆ ಬದಿಯ ಕಳೆ ತೆರವು, ಇತ್ತೀಚೆಗೆ ಕೃತಕ ನೆರೆ ಉಂಟಾದ ಪ್ರದೇಶಗಳಲ್ಲಿ ಕಾಲುವೆ ಒತ್ತುವರಿ ಮಾಡಿರುವುದನ್ನು ತಕ್ಷಣ ತೆರವುಗೊಳಿಸಬೇಕು. ಅಲ್ಲದೆ, ನಗರ ಭಾಗದಲ್ಲಿ ಬಾಕಿ ಉಳಿದಿರುವ ಅಪಾಯಕಾರಿ ಮರಗಳ ತೆರವಿಗೂ ಕ್ರಮ ವಹಿಸಬೇಕು ಎಂದರು.
ಪ್ರತಿ ಬುಧವಾರ ನಗರಸಭೆಯಲ್ಲಿ ಹಿರಿಯ ನಾಗರಿಕರಿಗೆ ಭೇಟಿಗೆ ಸಮಯ ಮೀಸಲಿಡಬೇಕು. ಹಳೆಯ ವಿಶ್ವೇಶ್ವರ ಮಾರುಕಟ್ಟೆ ಪ್ರದೇಶದಲ್ಲಿ ವಾಣಿಜ್ಯ ಮಳಿಗೆ, ಪಾರ್ಕಿಂಗ್ ಸೌಲಭ್ಯದೊಂದಿಗೆ ವ್ಯವಸ್ಥಿತ ನೂತನ ಬಸ್ ನಿಲ್ದಾಣದ ನೀಲಿನಕಾಶೆ ತಯಾರಿಸಿ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಕಾಮಗಾರಿಗಳನ್ನು ತಕ್ಷಣ ಆರಂಭಿಸಬೇಕು. ಸಮರ್ಪಕವಾಗಿ ದಾರಿ ದೀಪ ನಿರ್ವಹಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಪೌರಾಯುಕ್ತ ರಾಯಪ್ಪ, ನಗರಸಭೆಯ ಸದಸ್ಯರು ಇದ್ದರು.
ಪ್ರಕೃತಿ ವಿಕೋಪದಿಂದಾಗಿ ಸಾರ್ವಜನಿಕ ಆಸ್ತಿ-ಪಾಸ್ತಿ ಸೇರಿದಂತೆ ಇನ್ನಿತರ ಹಾನಿಯಿಂದ ಸುಮಾರು 25 ಕೋಟಿ ರೂಪಾಯಿಗೂ ಅಧಿಕ ನಷ್ಟವಾಗಿದೆ. ಈ ಕುರಿತು ಸರ್ಕಾರಕ್ಕೆ ಸಮರ್ಪಕ ವರದಿ ನೀಡಬೇಕು. ಉಡುಪಿ ವಿಧಾನಸಭಾ ಕ್ಷೇತ್ರದ ಉಡುಪಿ ಮತ್ತು ಬ್ರಹ್ಮಾವರ ತಾಲೂಕಿನ ಗ್ರಾಮೀಣ ಭಾಗದಲ್ಲಿ ಸುಮಾರು 55 ಮನೆಗಳು ಹಾನಿಯಾಗಿದ್ದು, ಕಂದಾಯ ಇಲಾಖೆಯಿಂದ ಕೇವಲ 10,03,500 ರೂ. ಮಾತ್ರ ಮಂಜೂರಿಯಾಗಿದೆ. ಸರ್ಕಾರ ಕೂಡಲೇ ಪೂರ್ಣ ಹಾನಿಗೀಡಾದ ಮನೆಗಳಿಗೆ 5 ಲಕ್ಷ ರೂ., ಭಾಗಶಃ ಹಾನಿಯಾದ ಮನೆಗಳಿಗೆ 3 ಲಕ್ಷ ರೂ.ವನ್ನು ಈ ಹಿಂದಿನಂತೆ ಮಂಜೂರು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸುವುದಾಗಿ ಶಾಸಕ ಯಶ್ಪಾಲ್ ಹೇಳಿದರು.