ಬ್ರಹ್ಮಾವರದಲ್ಲಿ ಕೃಷಿ ಕಾಲೇಜನ್ನೇ ಆರಂಭಿಸಿ

Published on

ಶಾಸಕ ಯಶ್​ಪಾಲ್​ ಸುವರ್ಣ ಆಗ್ರಹ | ಡಿಪ್ಲೊಮಾ ಬೇಡವೆಂದು ಸರ್ಕಾರಕ್ಕೆ ಮನವಿ

ಉಡುಪಿ: ಬ್ರಹ್ಮಾವರ ಕೃಷಿ ಕೇಂದ್ರದಲ್ಲಿ ಕೃಷಿ ಮಹಾವಿದ್ಯಾಲಯ ಆರಂಭಿಸಬೇಕೆಂಬ ಸ್ಥಳೀಯ ಜನತೆಯ ಒಕ್ಕೊರಲ ಬೇಡಿಕೆ, ಮನವಿ ಪರಿಗಣಿಸದೆ ರಾಜ್ಯ ಸರ್ಕಾರ ಡಿಪ್ಲೊಮಾ ಪುನರಾರಂಭಿಸಲು ಆದೇಶ ನೀಡಿದೆ. ಈ ನಿರ್ಧಾರವನ್ನು ಪುನರ್​ ಪರಿಶೀಲಿಸಿ, ಮುಂದಿನ ಶೈಕ್ಷಣಿಕ ವರ್ಷದಿಂದ ಕೃಷಿ ಕಾಲೇಜು ಆರಂಭಿಸಬೇಕು ಎಂದು ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಸರ್ಕಾರಕ್ಕೆ ಮಂಗಳವಾರ ಆಗ್ರಹಿಸಿದ್ದಾರೆ.

ಕರಾವಳಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಕೃಷಿ ವಿಭಾಗದಲ್ಲಿ ಪದವಿ ಶಿಕ್ಷಣಕ್ಕೆ ಅವಕಾಶ ಒದಗಿಸಲು ಈಗಾಗಲೇ ಬ್ರಹ್ಮಾವರ ಕೃಷಿ ಕೇಂದ್ರದಲ್ಲಿ ಎಲ್ಲ ವ್ಯವಸ್ಥೆ ಇದೆ. ಈ ಹಿನ್ನೆಲೆಯಲ್ಲಿ ಕರಾವಳಿ ಕೃಷಿ ಕಾಲೇಜು ಹೋರಾಟ ಸಮಿತಿ, ಬಿಜೆಪಿ ರೈತ ಮೋರ್ಚಾ ಹಾಗೂ ವಿವಿಧ ಸಂಘಟನೆಗಳು ಹಲವು ಬಾರಿ ರಾಜ್ಯ ಸರ್ಕಾರಕ್ಕೆ ಮನವಿಯನ್ನೂ ಮಾಡಿವೆ. ಕಳೆದ ವರ್ಷ ಅಕ್ಟೋಬರ್​ನಲ್ಲಿ ಕೃಷಿ ಸಚಿವ ಚೆಲುವರಾಯ ಸ್ವಾಮಿ ಅವರು ಬ್ರಹ್ಮಾವರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲೂ ನಾನೂ ಸಹ ಕೃಷಿ ಕಾಲೇಜು ಆರಂಭಿಸುವಂತೆ ಮನವಿ ಮಾಡಿದ್ದೇನೆ.

2022ರಲ್ಲಿ ರಾಜ್ಯ ಸರ್ಕಾರ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಡಿಪ್ಲೊಮಾ ಕೋರ್ಸ್​ ಮುಂದುವರಿಸದಂತೆ ಆದೇಶ ನೀಡಿದೆ. ಹೀಗಾಗಿ ಈ ಡಿಪ್ಲೊಮಾ ಕೋರ್ಸ್​ನ ಮಾನ್ಯತೆಯ ಗೊಂದಲ, ಉದ್ಯೋಗಾವಕಾಶ ಹಾಗೂ ಭವಿಷ್ಯದ ಅನಿಶ್ಚಿತತೆಯಿಂದ ವಿದ್ಯಾರ್ಥಿಗಳು ಹಾಗೂ ಪಾಲಕರೂ ಸಹ ಕೃಷಿ ಡಿಪ್ಲೊಮಾ ಕೋರ್ಸ್​ಗೆ ಅಸಕ್ತಿ ತೋರುತ್ತಿಲ್ಲ. ಇದನ್ನು ಸರ್ಕಾರ ಮುಖ್ಯವಾಗಿ ಪರಿಗಣಿಸಬೇಕು ಎಂದು ಯಶ್​ಪಾಲ್​ ಮನವಿ ಮಾಡಿದ್ದಾರೆ.

ಬ್ರಹ್ಮಾವರದ ಕೃಷಿ ಕೇಂದ್ರದಲ್ಲಿ ಕೃಷಿ ಕಾಲೇಜು ಆರಂಭಿಸಲು ಪೂರಕವಾಗಿರುವ 300 ಎಕರೆ ಜಾಗ, ಸುಸಜ್ಜಿತ ಕಟ್ಟಡ ಹಾಗೂ ಮೂಲಸೌಕರ್ಯವೂ ಇದೆ. ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊರೆಯೂ ಆಗದು. ಹೀಗಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ಕೃಷಿ ಕಾಲೇಜು ಆರಂಭಿಸಿ ಕರಾವಳಿ ಭಾಗದ ರೈತರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು. ಯಶ್​ಪಾಲ್​ ಸುವರ್ಣ. ಶಾಸಕ, ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net