

ವಿಜಯವಾಣಿ ಸುದ್ದಿಜಾಲ ಉಡುಪಿ
ಯಾರೇ ಆದರೂ ಜೀವಿತಾವಧಿಯಲ್ಲಿ ಸಾಧನೆ ಮಾಡಲು ಮೊದಲು ಆರೋಗ್ಯವಂತರಾಗಿರಬೇಕು. ಆ ಕಲ್ಪನೆಯೊಂದಿಗೆ ಉಡುಪಿಯ ರನ್ನರ್ಸ್ ಕ್ಲಬ್ನವರು 3 ವರ್ಷದಿಂದ ಮ್ಯಾರಥಾನ್ ಆಯೋಜಿಸುತ್ತಿದ್ದು, ಯುವ ಸಮುದಾಯದಲ್ಲಿ ಕ್ರೀಡಾ ಮನೋಭಾವ ಮೂಡಿಸುತ್ತಿದ್ದಾರೆ. ಅಲ್ಲದೆ, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಹಕರಿಸುತ್ತಿದ್ದಾರೆ ಎಂದು ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.
ಅದಾನಿ ಗ್ರೂಪ್ ನಿರ್ದೇಶಕ ಕಿಶೋರ್ ಆಳ್ವ, ಮಲ್ಪೆ ಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸಾಧು ಸಾಲ್ಯಾನ್, ಉದ್ಯಮಿ ಆನಂದ್ ಸುವರ್ಣ, ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ನ ಸಿಇಒ ಹರಿಕುಮಾರ್, ಡಿಜಿಎಂ. ಎಂ.ಅಂಬಲವನಮ್, ರನ್ನರ್ಸ್ ಕ್ಲಬ್ ಅಧ್ಯಕ್ಷ ಡಾ. ತಿಲಕ್ ಚಂದ್ರಪಾಲ್, ಯುವಕ್ರೀಡಾ ಮತ್ತು ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಶೆಟ್ಟಿ, ಉಡುಪಿ ರನ್ನರ್ಸ್ ಕ್ಲಬ್ ಪದಾಧಿಕಾರಿಗಳಾದ ದಿವಾಕರ್ ಗಣಪತಿ ನಾಯಕ, ಸತೀಶ್ ಸಾಲ್ಯಾನ್, ಉದಯಕುಮಾರ್ ಶೆಟ್ಟಿ, ದಿವೇಶ್ ಶೆಟ್ಟಿ, ಯತೀಶ್ ಇತರರಿದ್ದರು.
ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಮಿಷನ್ ಆಸ್ಪತ್ರೆಯ ನಿರ್ದೇಶಕ ಡಾ. ಸುಶೀಲ್ ಜತ್ತನ್ನ ಮಾತನಾಡಿ, ದೈಹಿಕ ಮತ್ತು ಮಾನಸಿಕ ಸ್ವಾಸ್ಥ$್ಯ ಕಾಪಾಡುವ ಉದ್ದೇಶದಿಂದ ಮ್ಯಾರಥಾನ್ ಆಯೋಜಿಸಲಾಗಿದೆ. ಪ್ರಸ್ತುತ ಜನಜೀವನದಲ್ಲಿ ಹೆಚ್ಚಿನ ಜನರಲ್ಲಿ ಹೃದಯಾಘಾತ ಆಗುತ್ತಿರುವುದನ್ನು ಕಾಣುತ್ತಿದ್ದೇವೆ. ಅಂತಹ ದುರಂತಕ್ಕೆ ಕಡಿವಾಣ ಹಾಕಲು ಆರೋಗ್ಯವಂತ ಸಮಾಜ ನಿಮಾರ್ಣವಾಗಬೇಕಿದೆ. ದೇಶ&ವಿದೇಶದ ಪ್ರವಾಸೋದ್ಯಮದಲ್ಲಿ ಉಡುಪಿಯ ಮಲ್ಪೆ ಹೆಸರು ಗುರುತಿಸುವಂತಾಗಬೇಕು. ಆ ನಿಟ್ಟಿನಲ್ಲಿ ಪ್ರತಿವರ್ಷ ಡಿ. 1ರಂದು ಮ್ಯಾರಥಾನ್ ನಡೆಯಬೇಕು. ಆ ದಿನವನ್ನು ನಮ್ಮ ವಾರ್ಷಿಕ ಕ್ಯಾಲೆಂಡರ್ನಲ್ಲೂ ಪ್ರಕಟವಾಗುವಂತಾಗಬೇಕು ಎಂದರು.
ಭಾನುವಾರ ನಸುಕಿನ 5 ಗಂಟೆಗೆ ಮಲ್ಪೆಯ ಸೀ ವಾಕ್ನಲ್ಲಿ ಶಾಸಕ ಯಶ್ಪಾಲ್ ಸುವರ್ಣ ಮ್ಯಾರಥಾನ್ಗೆ ಚಾಲನೆ ನೀಡಿದರು. ಪುರುಷ ಮತ್ತು ಮಹಿಳೆಯರಿಗೆ 21 ಕಿಮೀ, 10 ಕಿಮೀ, 5 ಕಿಮೀ, ಉಡುಪಿಯ ಶಾಲಾ ವಿದ್ಯಾರ್ಥಿಗಳಿಗೆ 5 ಮತ್ತು 3 ಕಿಮೀ ಮೋಜಿನ ಓಟ ಆಯೋಜಿಸಲಾಗಿತ್ತು. 21 ಕಿಮೀಯಲ್ಲಿ 250 ಮಂದಿ, 10 ಕಿಮೀಯಲ್ಲಿ 750, 5 ಕಿಮೀಯಲ್ಲಿ 850 ಮಂದಿ, ವಿದ್ಯಾರ್ಥಿಗಳ 5 ಮತ್ತು 3 ಕಿಮೀಯಲ್ಲಿ 1,050 ಮತ್ತು ನಗರ ರನ್ನಲ್ಲಿ 525 ಮಂದಿ ಪಾಲ್ಗೊಂಡಿದ್ದರು. ರಾಜ್ಯ, ಹೊರರಾಜ್ಯದ ಅಬಾಲ ವೃದ್ಧರಾದಿಯಾಗಿ 3,500 ಕ್ಕೂ ಅಧಿಕ ಓಟಗಾರರು ಪಾಲ್ಗೊಂಡಿದ್ದರು. ಇಥಿಯೋಪಿಯಾ, ಕೀನ್ಯಾ, ಜರ್ಮನ್, ಉಗಾಂಡದ ಅಂತಾರಾಷ್ಟ್ರೀಯ ಓಟಗಾರರೂ ಭಾಗವಹಿಸಿದ್ದರು.