

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸತತ ಮೂರನೇ ದಿನ ಶನಿವಾರವೂ ಭಾರಿ ಮಳೆಯಾಗುತ್ತಿದ್ದು, ತಗ್ಗುಪ್ರದೇಶಗಳು ಜಲಾವೃತಗೊಂಡಿವೆ.
ಬೆಳಗ್ಗೆಯಿಂದಲೇ ದಟ್ಟ ಮೋಡ ಕವಿದು ಮಳೆಯಾಗಿದ್ದು, ಸಾಯಂಕಾಲದವರೆಗೂ ನಿರಂತರ ಸುರಿದಿದೆ.
ಹೆಚ್ಚಿನ ನದಿಗಳು ತುಂಬಿ ಹರಿಯುತ್ತಿದ್ದು, ಬೈಕಂಪಾಡಿ, ಬಂಟ್ವಾಳ, ಉಪ್ಪಿನಂಗಡಿ, ಕಾಪು, ಪಡುಬಿದ್ರಿ ಮೊದಲಾದ ಕಡೆ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಅಲ್ಲಲ್ಲಿ ಗುಡ್ಡ, ಆವರಣ ಗೋಡೆ ಕುಸಿದದಂಥ ಘಟನೆಗಳು ನಡೆದಿವೆ. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೂ ಅಡಚಣೆಯಾಗಿದೆ. ನಗರ ಪ್ರದೇಶಗಳಲ್ಲಿ ಜನರ ಓಡಾಟ ಕಡಿಮೆಯಾಗಿತ್ತು.
ಶನಿವಾರ ಬೆಳಗ್ಗೆ ಅಂತ್ಯಗೊಂಡ ಕಳೆದ 24 ಗಂಟೆಗಳ ಅವಧಿಯಲ್ಲಿ ಬಂಟ್ವಾಳ 80.6, ಬೆಳ್ತಂಗಡಿ 52.7, ಮಂಗಳೂರು 92.5, ಪುತ್ತೂರು 60.7, ಸುಳ್ಯ 72.2 ಮಿ.ಮೀ. ಮಳೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ 81.50 ಮಿ.ಮೀ ಸರಾಸರಿ ಮಳೆ ದಾಖಲಾಗಿದೆ.
ಜಿಲ್ಲಾಡಳಿತ ಎಚ್ಚರಿಕೆ: ಕರಾವಳಿಯಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ನೆರೆ ಸಂಭವ ಇದ್ದು, ನದಿತಟಗಳಲ್ಲಿ ವಾಸ ಇರುವವರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚಿಸಿದೆ. ಅಗ್ನಿಶಾಮಕ, ಗೃಹರಕ್ಷಕ ಹಾಗೂ ಪೌರರಕ್ಷಣಾ ಪಡೆ ಮಳೆಯಿಂದ ಎದುರಾಗುವ ಪರಿಸ್ಥಿತಿ ನಿಭಾಯಿಸಲು ಸನ್ನದ್ಧವಾಗಿದೆ. ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಬೃಹತ್ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಸಾರ್ವಜನಿಕರು ಸಮುದ್ರ ಕಿನಾರೆಗೆ ಹೋಗದಂತೆ ಪೊಲೀಸ್ ಹಾಗೂ ಗೃಹರಕ್ಷಕದಳದ ಸಿಬ್ಬಂದಿ ನಿಗಾ ವಹಿಸಿದ್ದಾರೆ.
ಮಳೆ ಇಳಿಕೆ ಸಾಧ್ಯತೆ: ಹವಾಮಾನ ಇಲಾಖೆಯು ಭಾನುವಾರ ಬೆಳಗ್ಗೆ 8.30ರವರೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದ್ದು, ಈ ಅವಧಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ಬಳಿಕ ಜುಲೈ 9ರವರೆಗೆ ಯೆಲ್ಲೋ ಅಲರ್ಟ್ ನೀಡಿದೆ, ಈ ಅವಧಿಯಲ್ಲಿ ಮಳೆ ಕಡಿಮೆಯಾಗುವ ನಿರೀಕ್ಷೆ ಇದೆ.
12 ಮನೆಗಳಿಗೆ ನುಗ್ಗಿದ ನೀರು
ಬಂಟ್ವಾಳ: ತಾಲೂಕಿನ ಸಜೀಪನಡು ಗ್ರಾಮದಲ್ಲಿ ಕೃತಕ ನೆರೆ ಸೃಷ್ಟಿಯಾಗಿ 12 ಮನೆಗಳಿಗೆ ನೀರು ನುಗ್ಗಿತ್ತು. ಕರಿಯಂಗಳ ಗ್ರಾಮದ ಬಡಕಬೈಲು ಗಾಣೆಮಾರ್‌ನಲ್ಲಿ ಪೂರ್ಣೇಶ್ವರಿ ಎಂಬುವರ ಮನೆಯ ಬಳಿ ಗುಡ್ಡ ಕುಸಿದಿದೆ.
ನದಿ ನೀರಿನ ಮಟ್ಟ ಹೆಚ್ಚಳ
ಉಪ್ಪಿನಂಗಡಿ: ನೇತ್ರಾವತಿ ನದಿ ನೀರಿನ ಹರಿವಿನಲ್ಲಿ ಸಾಧಾರಣ ಹೆಚ್ಚಳ ಕಾಣಿಸಿಕೊಂಡಿದ್ದರೆ, ಕುಮಾರಧಾರಾ ನದಿಯಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ. ಶನಿವಾರ ಸಾಯಂಕಾಲ ಶಂಭೂರು ಅಣೆಕಟ್ಟು ಆಧರಿತ ಜಲಮಟ್ಟದ ಅನ್ವಯ ನೇತ್ರಾವತಿ ನದಿಯ ನೀರಿನಮಟ್ಟ ಸಮುದ್ರ ಮಟ್ಟಕ್ಕಿಂತ 25 ಮೀ. ಸನಿಹದಲ್ಲಿ ಹರಿಯುತ್ತಿದೆ. ಇಲ್ಲಿ ಅಪಾಯದ ಮಟ್ಟ 30 ಮೀಟರ್.
40ಕ್ಕೂ ಅಧಿಕ ಮನೆ ಜಲಾವೃತ: ಉಡುಪಿ ನಗರದಲ್ಲಿ ಕಲ್ಸಂಕ ತೋಡು ತುಂಬಿ ಹರಿಯುತ್ತಿರುವ ಪರಿಣಾಮ ಬೈಲಕೆರೆ, ಮಠದಬೆಟ್ಟು, ಬನ್ನಂಜೆ ಮೂಡನಿಡಂಬೂರು ಪ್ರದೇಶಗಳಲ್ಲಿ ಹಲವು ಮನೆಗಳು ಜಲಾವೃತವಾಗಿವೆ. ಕೃಷ್ಣ ಮಠ ರಾಜಾಂಗಣ ಪರಿಸರ ಪಾರ್ಕಿಂಗ್ ಪ್ರದೇಶ ಮಳೆ ನೀರು ಆವೃತವಾಗಿದೆ.
ಕಾಪು ಪುರಸಭಾ ವ್ಯಾಪ್ತಿಯ ಮೂಳೂರು, ಬೆಳಪು -ಮಲ್ಲಾರು ರಸ್ತೆಯಲ್ಲಿ ಕೃತಕ ನೆರೆಯಿಂದಾಗಿ ರಸ್ತೆ ಮತ್ತು ಸುತ್ತಲಿನ ಪರಿಸರ ಸಂಪೂರ್ಣ ಜಲಾವೃತಗೊಂಡಿದೆ. ಬೆಳಪು ಪರಿಸರದ 40ಕ್ಕೂ ಹೆಚ್ಚಿನ ಮನೆಗಳು ಜಲಾವೃತಗೊಂಡಿವೆ. ಬೆಳಪು ಮಲ್ಲಾರಿನ ಎರಡು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಉಚ್ಚಿಲದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಇಕ್ಕೆಲಗಳಲ್ಲಿ ಚರಂಡಿಯಿಲ್ಲದೆ ಕೃತಕ ನೆರೆ ಉಂಟಾಗಿ ಕೆಲ ಅಂಗಡಿಗಳಿಗೆ ನೀರು ನುಗ್ಗಿದೆ. ಪಡುಬಿದ್ರಿಯಲ್ಲಿ ಒಳಚರಂಡಿ ಅರೆಬರೆ ಕಾಮಗಾರಿಯಿಂದ ನೀರು ನುಗ್ಗಿ ಮೂರ್ನಾಲ್ಕು ಮನೆಗಳು, ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಅಂಗಡಿ, ಬ್ಯಾಂಕ್‌ಗಳಿಗೆ ತೊಂದರೆಯಾಗಿದೆ.
ಚಾರ್ಮಾಡಿ ಘಾಟ್‌ನಲ್ಲಿ ವಾಹನ ನಿಲುಗಡೆ ನಿಷೇಧ
ಬೆಳ್ತಂಗಡಿ: ವಾಹನ ನಿಲ್ಲಿಸಿ ಅಪಾಯಕಾರಿ ಜಾಗಗಳಲ್ಲಿ ಜನರು ಓಡಾಡುತ್ತಿರುವುದು ಹೆಚ್ಚಾಗಿರುವ ಕಾರಣ ದ.ಕ- ಚಿಕ್ಕಮಗಳೂರು ಜಿಲ್ಲೆಗೆ ಸಂಪರ್ಕ ಸೇತುವಾಗಿರುವ ಚಾರ್ಮಾಡಿ ಘಾಟ್‌ನಲ್ಲಿ ವಾಹನ ನಿಲುಗಡೆಯನ್ನು ಜಿಲ್ಲಾಡಳಿತ ನಿಷೇಧಿಸಿದೆ. ಕೊಟ್ಟಿಗೆಹಾರ ಚೆಕ್‌ಪೋಸ್ಟ್‌ನಲ್ಲಿ ಅಧಿಕಾರಿಗಳು ಈ ಕುರಿತು ಸೂಚನೆ ನೀಡುತ್ತಿದ್ದಾರೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.