

ಉಡುಪಿ ಅನ್ನದಾನಕ್ಕೆ ಮೀಸಲಾದ ಕ್ಷೇತ್ರವಾಗಿದ್ದು, 800 ವರ್ಷಗಳಿಂದ ನಿರಂತರ ಅನ್ನದಾನ ನಡೆಯುತ್ತಿದೆ. ಅನ್ನದಾನದ ಮೂಲಕವೇ ದೇವರನ್ನು ಆರಾಧಿಸಲಾಗುತ್ತಿದೆ ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ರಾಜಾಂಗಣದಲ್ಲಿ ಶ್ರೀಕೃಷ್ಣಸಪ್ತೋತ್ಸವ ಅಂಗವಾಗಿ ನಡೆದ ನೃತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉಡುಪಿಯಲ್ಲಿ ಬಾಲ ಕೃಷ್ಣ ನೆಲೆಸಿದ್ದು, ಉತ್ಸವ ಪ್ರಿಯನಾಗಿದ್ದಾನೆ. ಹೀಗಾಗಿ ಮಕ್ಕಳಿಗೆ ಆಟಕೆಗಳನ್ನು ನೀಡುವಂತೆ ಪರ್ಯಾಯ ಕಾಲದಲ್ಲಿ ಆತನಿಗೆ ಚಿನ್ನ&ಬೆಳ್ಳಿಯ ರಥ, ಪಲ್ಲಕಿಗಳನ್ನು ಸ್ವಾಮೀಜಿಗಳು ಸಮರ್ಪಣೆ ಮಾಡುವ ಪದ್ಧತಿ ಇದೆ. ಈ ಬಾರಿ ಚಿನ್ನದ ಪಾರ್ಥಸಾರಥಿ ರಥವನ್ನು ಸಮರ್ಪಿಸುವ ಸಂಕಲ್ಪ ಮಾಡಿದ್ದೇವೆ. ಅದೇ ರೀತಿ ಉಡುಪಿಯ ಇತಿಹಾಸ, ಕೃಷ್ಣ ಮಠದ ಮಾಹಿತಿಗಳನ್ನು ಪ್ರವಾಸಿಗರಿಗೆ ನೀಡುವ ಉದ್ಧೇಶದಿಂದ ಗೀತಾ ಮಂದಿರದಲ್ಲಿ ಪ್ಲಾನಿಟೋರಿಯಂ ಪ್ರಾರಂಭಿಸಲಾಗಿದೆ ಎಂದರು.
ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು. ಶಾಸಕರಾದ ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಉದ್ಯಮಿಗಳಾದ ಬಂಜಾರ ಪ್ರಕಾಶ್ ಶೆಟ್ಟಿ, ಮನೋಹರ ಶೆಟ್ಟಿ, ವಾಸುದೇವಶೆಟ್ಟಿ ಕಾಪು, ಹಿರಿಯ ವಕೀಲ ಮಟ್ಟಾರು ರತ್ನಾಕರ ಹೆಗ್ಡೆ, ಮಾಜಿ ಶಾಸಕ ರುಪತಿ ಭಟ್, ಆಹಾರ ತಜ್ಞೆ ಪ್ರೇಮಾ ಎಚ್.ಎಸ್., ರತ್ನಾಕರ ಇಂದ್ರಾಳಿ, ಉದಯ್ ಕುಮಾರ್ ಶೆಟ್ಟಿ, ಹರೀಶ್ ಮಧ್ಯಸ್ಥ, ಶ್ರೀವತ್ಸ ಆಚಾರ್, ಶಶಿಕುಮಾರ್ ತಮ್ಮಯ್ಯ, ಕ್ರಿಕೇಟಿಗ ವಿಜಯ್ ಭಾರಧ್ವಾಜ್, ಕೆ.ಎನ್. ರಾವೇಂದ್ರ ರಾವ್ ಮೊದಲಾದವರು ಉಪಸ್ಥಿತರಿದ್ದರು. ರಮೇಶ್ ಭಟ್ ಸ್ವಾಗತಿಸಿ, ಗೋಪಾಲಾಚಾರ್ಯ ಕಾರ್ಯಕ್ರಮ ನಿರೂಪಿಸಿದರು.