

ಉಡುಪಿ: ಶ್ರೀಕೃಷ್ಣಜನ್ಮಾಷ್ಟಮಿ ಹಿನ್ನೆಲೆಯಲ್ಲಿ ನಗರದಲ್ಲಿ ವ್ಯಾಪಾರ ವಹಿವಾಟು ಜೋರಾಗಿದ್ದು, ಜಿಲ್ಲೆ, ಹೊರ ಜಿಲ್ಲೆಗಳಿಂದ ಆಗಮಿಸಿದ ವ್ಯಾಪಾರಿಗಳು ನಗರದ ವಿವಿಧೆಡೆ ಅಂಗಡಿಗಳನ್ನು ತೆರೆದಿದ್ದಾರೆ. ರಥಬೀದಿಯಲ್ಲಿ ಹಾಸನ, ಚಿಕ್ಕಮಗಳೂರು ಮುಂತಾದ ಕಡೆಯಿಂದ ಆಗಮಿಸಿದ ಹೂವಿನ ವ್ಯಾಪಾರಿಗಳು ಸಾಲು ಸಾಲಾಗಿ ಜಮಾಗೊಂಡಿದ್ದು, ಸೇವಂತಿಗೆ, ಕಾಕಡ, ತುಳಸಿ ಮಾಲೆ, ಬಿಳಿಸೇವಂತಿಗೆ ಮಾರಾಟಮಾಡುತ್ತಿದ್ದಾರೆ.
ಎಲ್ಲಾ ಓಣಿಗಳಲ್ಲಿ ಅಂಗಡಿಗಳು
ಹೂ, ಹಣ್ಣಿನ ವ್ಯಾಪಾರಿಗಳಲ್ಲದೆ ಆಟಿಕೆ ಸಾಮಗ್ರಿ, ಫ್ಯಾನ್ಸಿ ಅಂಗಡಿಗಳ ಬೀದಿ ವ್ಯಾಪಾರ ಜೋರಾಗಿ ನಡೆಯುತ್ತಿದ್ದು, ಶುಕ್ರವಾರವೇ ಭಟ್ಕಳ, ಹುಬ್ಬಳ್ಳಿ, ಕುಂದಾಪುರ, ಮಂಗಳೂರಿನಿಂದ ವ್ಯಾಪಾರಿಗಳು ನಗರಕ್ಕೆ ಆಗಮಿಸಿ ತಮ್ಮ ತಮ್ಮ ಜಾಗವನ್ನು ನಿಗದಿಪಡಿಸಿಕೊಳ್ಳುತ್ತಿದ್ದಾರೆ. ತೆಂಕಪೇಟೆ, ಬಡಗುಪೇಟೆ, ಸಂಸತ ಕಾಲೇಜು ರಸ್ತೆ, ಸೋದೆ ಮಠದ ಓಣಿ ಹೀಗೆ ರಥಬೀದಿ ಸಂಪರ್ಕಿಸುವ ಎಲ್ಲಾ ಒಳರಸ್ತೆಗಳಲ್ಲಿ ಬೀದಿ ವ್ಯಾಪಾರಿಗಳು ಮಾರಾಟದಲ್ಲಿ ತೊಡಗಿದ್ದಾರೆ. ನಗರದ ಶ್ರೀಕೃಷ್ಣಮಠ ರಥಬೀದಿಯಲ್ಲಿ ಪೂಜಾ ಸಮಾಗ್ರಿಗಳ ಖರೀದಿಯಲ್ಲಿ ಸಾರ್ವಜನಿಕರು ತೊಡಗಿಸಿಕೊಂಡಿದ್ದರು. ಉಂಡೆ, ಚಕ್ಕುಲಿ ತಯಾರಿಸಲು ಹಿಟ್ಟುಗಳ ಖರೀದಿಯೂ ಜೋರಾಗಿತ್ತು.
ಕೃಷ್ಣ ವೇಷ ಸ್ಪರ್ಧೆಗೆ 300ಕ್ಕೂ ಅಧಿಕ ನೊಂದಣಿ
ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಆ.26ರಂದು ಬೆಳಗ್ಗೆ 9.30ರಿಂದ ಗೀತಾ ಮಂದಿರದಲ್ಲಿ 1 ವರ್ಷದೊಳಗಿನ ಮಕ್ಕಳಿಗೆ ಬೆಣ್ಣೆಕೃಷ್ಣ, 3 ವರ್ಷದೊಳಗಿನ ಮಕ್ಕಳಿಗೆ ಮುದ್ದುಕೃಷ್ಣ ಸ್ಪರ್ಧೆ, ರಾಜಾಂಗಣದಲ್ಲಿ 3 ರಿಂದ 5 ವರ್ಷದವರೆಗಿನ ಮಕ್ಕಳಿಗೆ ಬಾಲಕೃಷ್ಣ ಸ್ಪರ್ಧೆ, 5 ರಿಂದ 8 ವರ್ಷದೊಳಗಿನ ಮಕ್ಕಳ ಕಿಶೋರ ಕೃಷ್ಣ ಸ್ಪರ್ಧೆ ಆಯೋಜಿಸಲಾಗಿದೆ. ಈಗಾಗಲೇ ಮಠದಲ್ಲಿ ಕೃಷ್ಣ ಸ್ಪರ್ಧೆಗೆ 300ಕ್ಕೂ ಅಧಿಕ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.
ಪೊಲೀಸ್ ಭದ್ರತೆ
ಕೃಷ್ಣ ಮಠದಲ್ಲಿ ಅಷ್ಟಮಿ ಅಂಗವಾಗಿ ದೇವರ ದರ್ಶನಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಭದ್ರತೆ ದೃಷ್ಟಿಯಿಂದ 100ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮಠದ ಮುಂಭಾಗದಲ್ಲಿರುವ ಹೊರಠಾಣೆಯಲ್ಲಿ ಸಿಬ್ಬಂದಿ ಸಂಖ್ಯೆ ಹೆಚ್ಚಿಸಲಾಗಿದ್ದು, 3 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಕಬಡ್ಡಿಯಾಡಿದ ಪುತ್ತಿಗೆ ಶ್ರೀಗಳು
ಶ್ರೀಕಷ್ಣ ಸಪ್ತೋತ್ಸವ ಅಂಗವಾಗಿ ಕೃಷ್ಣ ಮಠದಲ್ಲಿ ವಿವಿಧ ಸಾಂಸತಿ ಕಾರ್ಯಕ್ರಮ ಹಾಗೂ ಸ್ಪರ್ಧೆಗಳು ನಡೆಯುತ್ತಿದ್ದು, ಭಾನುವಾರ ಬೆಳಗ್ಗೆ ಬೈಲಕೆರೆ ಮೈದಾನದಲ್ಲಿ ಮಠದ ಸಿಬ್ಬಂದಿ ಹಾಗೂ ಶಿಷ್ಯರಿಗಾಗಿ ಕಬ್ಬಡ್ಡಿ ಸ್ಪರ್ಧೆ ಆಯೋಜಿಸಲಾಗಿತ್ತು. ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹಾಗೂ ಶಿಷ್ಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಸ್ಪರ್ಧೆಗೆ ಚಾಲನೆ ನೀಡಿ ಕಬ್ಬಡ್ಡಿ ಆಟ ಆಡುವ ಮೂಲಕ ಗಮನಸೆಳೆದರು. ಈ ಸಂದರ್ಭದಲ್ಲಿ ಕ್ರಿಕೇಟ್ ಆಟಗಾರ ವಿಜಯ್ ಭಾರಧ್ವಾಜ್, ದಿವಾನ್ ನಾಗರಾಜ ಆಚಾರ್ಯ, ರಮೇಶ್ ಭಟ್ ಮೊದಲಾದವರು ಉಪಸ್ಥಿತರಿದ್ದರು. ಮಧ್ವಾಂಗಣದಲ್ಲಿ ಬೆಳಗ್ಗೆಯಿಂದ ರಂಗೋಲಿ ಸ್ಪರ್ಧೆ, ರಾಜಾಂಗಣದಲ್ಲಿ ವಿದ್ಯಾರ್ಥಿಗಳಿಂದ ಸಮೂಹ ನೃತ್ಯ, ಮೊಸರು ಕುಡಿಕೆ ಉತ್ಸವದಲ್ಲಿ ಬಳಸುವ ಮಡಕೆಗಳಿಗೆ ಬಣ್ಣದ ಚಿತ್ತಾರ ಸ್ಪರ್ಧೆ ನಡೆಯಿತು.