

ಉಡುಪಿ: ಕೃಷ್ಣಮಠದಲ್ಲಿ ವಿಜಯದಶಮಿ ಅಂಗವಾಗಿ ಮಂಗಳವಾರ ಕದಿರುಕಟ್ಟುವ ಕಾರ್ಯಕ್ರಮ ನಡೆಯಿತು. ಸೋದೆ ವಾದಿರಾಜ ಮಠದ ಹೆಬ್ಬಾಗಿಲಿನಲ್ಲಿರಿಸಿದ ಕದಿರಿಗೆ, ಪರ್ಯಾಯ ಕೃಷ್ಣಾಪುರ ಮಠದ ಪುರೋಹಿತ ಶ್ರೀನಿವಾಸ ಉಪಾಧ್ಯಾಯ ಪೂಜೆಯನ್ನು ನೆರವೇರಿಸಿದರು.
ನಂತರ ಸಕಲ ವಾದ್ಯ, ಬಿರುದಾವಳಿಗಳೊಂದಿಗೆ ಚಿನ್ನದಪಲ್ಲಕಿಯಲ್ಲಿ ಕದಿರನ್ನಿರಿಸಿ ಮೆರವಣಿಗೆಯಲ್ಲಿ ಕೃಷ್ಣ ಮಠದ ಗರ್ಭಗುಡಿಯ ಪೂರ್ವದ್ವಾರದಿಂದ ಪ್ರವೇಶಿಸಿ ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಪೂಜೆ ನಡೆಸಲಾಯಿತು. ನಂತರ ಬಡಗುಮಾಳಿಗೆಯಲ್ಲಿ ಗಣಪತಿ ಪ್ರತಿಮೆ ಮುಂಭಾಗ ಪೂಜೆ ಸಲ್ಲಿಸಿದ ಬಳಿಕ ಭಕ್ತಾದಿಗಳಿಗೆ ಕದಿರನ್ನು ವಿತರಿಸಲಾಯಿತು.