

ಉಡುಪಿ: ಅಲೆವೂರಿನಲ್ಲಿರುವ ಕೇಂದ್ರೀಯ ವಿದ್ಯಾಲಯ ಮತ್ತು ಒಂಭತ್ತು ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣಕ್ಕೆ ಕೇಂದ್ರ ಶಿಕ್ಷಣ ಮತ್ತು ಕೌಶಲ್ಯ ಇಲಾಖೆ ಸುಮಾರು 26 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಪ್ರಸ್ತುತ ಬಾಡಿಗೆ ಕಟ್ಟಡದಲ್ಲಿ ಕೇಂದ್ರೀಯ ವಿದ್ಯಾಲಯ ನಡೆಯುತ್ತಿದ್ದು, ಉಡುಪಿ ಜಿಲ್ಲೆಯಲ್ಲಿನ ಕೇಂದ್ರೀಯ ವಿದ್ಯಾಲಯ ಮತ್ತು ಸಿಬ್ಬಂದಿ ವಸತಿ ಕಟ್ಟಡಗಳ ಅವಶ್ಯಕತೆ ಬಗ್ಗೆ ಕೇಂದ್ರದ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಮನವಿ ಮಾಡಲಾಗಿತ್ತು. ಒಂದರಿಂದ ಹತ್ತನೆಯ ತರಗತಿಗಳಿಗೆ ತಲಾ ಎರಡು ವಿಭಾಗಗಳುಳ್ಳ ತರಗತಿ ಕೊಠಡಿಗಳು ಮತ್ತು ಒಂಬತ್ತು ಸಿಬ್ಬಂದಿ ವಸತಿಗಳ ಕಟ್ಟಡದ ನಿರ್ಮಾಣಕ್ಕೆ ಈಗಾಗಲೇ ಟೆಂಡರ ಅನುಮೋದನೆಯಾಗಿದೆ. ಅತೀ ಶೀಘ್ರದಲ್ಲಿ ಕಟ್ಟಡ ಕಾಮಗಾರಿ ಪ್ರಾರಂಭವಾಗಲಿದೆ. ಕೇಂದ್ರೀಯ ವಿದ್ಯಾಲಯದ ಹೊಸ ಕಟ್ಟಡದಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿದೆ ಎಂದು ತಿಳಿಸಿದ್ದಾರೆ.