ಜಿಲ್ಲೆಗೆ ಅನುದಾನ ಒದಗಿಸಲು ಸಿಎಂ ಬಳಿ ನಿಯೋಗ

udp-30-kdp meeting
Published on

ಉಡುಪಿ: ಮೂಸೌಕರ್ಯ ಅಭಿವೃದ್ಧಿಗೆ ಪ್ರಕೃತಿ ವಿಕೋಪ ನಿಧಿ ಅನುದಾನದಲ್ಲಿ ಕೊರತೆ ಉಂಟಾಗಿದ್ದು, ಈ ಬಗ್ಗೆ ವಿಧಾನಸಭಾ ಅಧಿವೇಶನದ ಸಂದರ್ಭದಲ್ಲಿ ಜಿಲ್ಲೆಯ ಶಾಸಕರ ನಿಯೋಗದೊಂದಿಗೆ ಮುಖ್ಯಮಂತ್ರಿಗಳ ಬಳಿ ಹೋಗಿ ಜಿಲ್ಲೆಗೆ ಅನುದಾನ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ  ಲಕ್ಷ್ಮಿ ಹೆಬ್ಬಾಳಕರ್​ ಹೇಳಿದರು.

ಶನಿವಾರ ಜಿಪಂ ಸಭಾಂಗಣದಲ್ಲಿ ನಡೆದ ತೆಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸ್ತುತ ಸಾಲಿನಲ್ಲಿ ವಾಡಿಕೆಗಿಂಡ ಶೇ. 17ರಷ್ಟು ಹೆಚ್ಚು ಮಳೆಯಾಗಿದೆ. ಹೆಚ್ಚಿನ ಮಳೆಯಿಂದಾಗಿ ಬೆಳೆಹಾನಿ, ರಸ್ತೆ, ಸರ್ಕಾರಿ ಕಟ್ಟಡಗಳು, ಸೇತುವೆ ಸೇರಿದಂತೆ ಆಸ್ತಿ ಪಾಸ್ತಿಗಳಿಗೆ ಹಾನಿವುಂಟಾಗಿದೆ. ಈಗಾಗಲೇ ಮನೆ ದುರಸ್ತಿ, ಬೆಳೆಹಾನಿ, ಮಾನವ ಜೀವ ಹಾನಿಗೆ ಪರಿಹಾರವನ್ನು ನೀಡಲಾಗಿದೆ ಎಂದರು.

ಕಳೆದ ನಾಲ್ಕೆ$ದು ವರ್ಷದಲ್ಲಿ 666 ಕಿಂಡಿ ಅಣೆಕಟ್ಟುಗಳನ್ನು ನಿಮಾರ್ಣ ಮಾಡಲಾಗಿದೆ. ಸಾಮಾನ್ಯವಾಗಿ ನವೆಂಬರ್​ ತಿಂಗಳಲ್ಲಿ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಅಳವಡಿಸುವ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿತ್ತು, ಈಗಾಗಲೇ ಶೇ. 50 ಕ್ಕೂ ಹೆಚ್ಚು ಹಲಗೆ ಅಳವಡಿಸಲಾಗಿದೆ. ಬಾಕಿ ಉಳಿದಿರುವುದಕ್ಕೆ ಡಿ. 20 ರೊಳಗೆ ಹಲಗೆ ಅಳವಡಿಸಲು ಸೂಚನೆ ನೀಡಿದರು. ದುರಸ್ತಿಗಾಗಿ ಅನುದಾನ ಬಿಡುಗಡೆ ಮಾಡಲಾಗಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.

ಹೆಜಮಾಡಿ ಬಂದರು ಶೇ.80 ಕಾಮಗಾರಿ

ಮೀನುಗಾರಿಕೆಗೆ ಅನುಕೂಲವಾಗುವ ಉದ್ದೇಶದಿಂದ ಹೆಜಮಾಡಿ ಮೀನುಗಾರಿಕೆ ಬಂದರಿನ ಅಭಿವೃದ್ಧಿ ಕಾಮಗಾರಿ ಶೇ. 80ರಷ್ಟು ಮುಕ್ತಾಯಗೊಂಡಿದ್ದು, ಬಾಕಿ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಬೇಕು, ಹಂಗಾರಕಟ್ಟೆಯಲ್ಲಿ ಕೋಸ್ಟಲ್​ ರ್ಬತ್​ ಕಾಮಗಾರಿಗೆ ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ ಅನುಮೋದನೆ ದೊರಕಿದೆ. ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕು. ಗಂಗೊಳ್ಳಿಯ ಕೋಸ್ಟಲ್​ ರ್ಬತ್​ ಕಾಮಗಾರಿ ಕೈಗೊಳ್ಳಲು ಸಿಆರ್​.ಝೆಡ್​ ನ ನಿರಾಕ್ಷೇಪಣಾ ಪತ್ರ ಪಡೆದು ಕಾಮಗಾರಿ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಮನೆಬಾಗಿಲಿಗೆ ಸರ್ಕಾರಿ ಯೋಜನೆ

ಪಶ್ಚಿಮಟ್ಟ ಕಾಡುಗಳ ತಪ್ಪಲಲ್ಲಿ ವಾಸಿಸುವ ಮಲೆಕುಡಿಯ, ಕೊರಗ ಬುಡಕಟ್ಟು ಸಮುದಾಯದವರಿಗೆ ಸರ್ಕಾರದ ಯೋಜನೆಗಳು , ಗ್ಯಾರಂಟಿ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕು. ಕಂದಾಯ ಇಲಾಖೆ. ಅಹಾರ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸಿ, ಅರ್ಹರಿರುವ ಪ್ರತಿಯೊಬ್ಬರಿಗೂ ಮನೆಬಾಗಿಲಿಗೆ ತಲುಪಿಸಲು ಖಡಕ್​ ಸೂಚನೆ ನೀಡಿದರು.

ವಾರಾಹಿ ಶ್ರೀ ಪೂರ್ಣಗೊಳಿಸಿ

ಉಡುಪಿ ನಗರಕ್ಕೆ ಕುಡಿಯುವ ನೀರನ್ನು ಒದಗಿಸಲು ವರಾಹಿ ಯೋಜನೆಯ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಿದರು. ವರಾಹಿ ನೀರಾವರಿ ಯೋಜನೆಗೆ 9 ಕಿಲೋ ಮೀಟರ್​ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯ ಪೂರ್ವನುಮತಿ ಈಗಾಗಲೇ ನೀಡಲಾಗಿದ್ದು, ಕೆಲವು ಕಾಮಗಾರಿನ್ನು ಕೈಗೊಳ್ಳಲಾಗಿದೆ. ಬಾಕಿ ಇರುವ ಕಾಮಗಾರಿಗಳನ್ನು ಆದ್ಯತೆ ಮೇಲೆ ಕೈಗೊಳ್ಳಬೇಕು. ಇದರಿಂದ 2700 ಹೆಕ್ಟೇರ್​ ನೀರಾವರಿ ಪ್ರದೇಶಗಳಿಗೆ ಅನುಕೂಲವಾಗಲಿದೆ ಎಂದರು.

ಹಕ್ಕುಪತ್ರ ನೀಡಲು ಕ್ರಮವಹಿಸಿ

ಬಡ ಜನರಿಗೆ 94 ಸಿ ಹಾಗೂ 53, 54 ನಲ್ಲಿ ಜಾಗ ಕೋರಿ ಸಲ್ಲಿಸಿದ ಅರ್ಜಿಗಳಲ್ಲಿ ಜಿಲ್ಲೆಯಲ್ಲಿ ಸಾವಿರಾರು ಅರ್ಜಿಗಳನ್ನು ಅನರ್ಹಗೊಳಿಸಲಾಗಿವೆ ಎಂಬ ದೂರುಗಳು ಕೇಳಿ ಬರುತ್ತಿವೆ. ಡೀಮ್ಡ್​ ಫಾರೆಸ್ಟ್​ ವ್ಯಾಪ್ತಿಯಲ್ಲಿ ಬರದೇ ಇರುವ ಪ್ರದೇಶದ ಜಾಗವನ್ನು ಸರ್ವೇ ಮಾಡಿ, ಸೂಕ್ತ ಭೂಮಿಯನ್ನು ಗುರುತಿಸಿ, ಅರ್ಹರಿಗೆ ಹಕ್ಕು ಪತ್ರಗಳನ್ನು ನೀಡುವಂತೆ ನೋಡಿಕೊಳ್ಳಬೇಕು. ಈಗಾಗಲೇ ತಾಲೂಕು ಮಟ್ಟದ ಸಮಿತಿಗಳು, ಆಯ್ಕೆ ಮಾಡಿರುವ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ಕೂಡಲೇ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲೆಗೆ ಈಗಾಗಲೇ ಹೊಸದಾಗಿ ಎರಡು ಹಾಸ್ಟೆಲ್​ಗಳು ಮಂಜೂರಾಗಿದೆ. ಪ್ರತಿ ತಾಲೂಕಿಗೂ ಹಾಸ್ಟೆಲ್​ಗಳು ಬೇಕೆಂಬ ಬೇಡಿಕೆ ಇದೆ. ಹೆಚ್ಚುವರಿ ಹಾಸ್ಟೆಲ್​ಗಳನ್ನು ಜಿಲ್ಲೆಗೆ ತರಲು ಪ್ರಯತ್ನಿಸಲಾಗುವುದು ಎಂದರು. ಗ್ರಾಮೀಣ ಭಾಗಗಳಲ್ಲಿ ಕಳೆದ ಹಲವು ತಿಂಗಳಿನಿಂದ ತಾಂತ್ರಿಕ ಕಾರಣದಿಂದಾಗಿ ಘನತಾಜ್ಯ ವಿಲೇವಾರಿ ವೈಜ್ಞಾನಿಕ ರೀತಿಯಲ್ಲಿ ಆಗುತ್ತಿಲ್ಲ. ಇದನ್ನೂ ಕೂಡಲೇ ಬಗೆಹರಿಸಿ, ತ್ಯಾಜ್ಯ ಪ್ಲಾಸ್ಟಿಕ್​ ಮುಕ್ತ ಜಿಲ್ಲೆಯನ್ನಾಗಿಸಬೇಕೆಂದರು. ಜಿಲ್ಲೆಯಲ್ಲಿ ಜನ ಸಾಮಾನ್ಯರು ಮನೆಕಟ್ಟಲು ಅನುಮತಿ ಪಡೆಯಲು ತುಂಬಾ ತೊಂದರೆ ಅನುಭವಿಸುತ್ತಿದ್ದು, ವಿಶೇಷವಾಗಿ ಜಿಲ್ಲೆಯಲ್ಲಿ 9 ಮತ್ತು 11 ಸಮಸ್ಯೆ ಇದ್ದು, ಆರ್​ಡಿಪಿಆರ್​, ಕಂದಾಯ, ನಗರಾಭಿವೃದ್ಧಿ ಇಲಾಖೆಗಳು ಸಮಸ್ಯೆಗಳನ್ನು ಬಗೆಹರಿಸಲು ಸೂಚನೆ ನೀಡಿದರು. ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ಸೀಫುಡ್​ ಪಾರ್ಕ್​ ನಿಮಾರ್ಣ ಮಾಡಲು ಈಗಾಗಲೇ ಜಮೀನು ಮಂಜೂರಾಗಿದ್ದು, 69 ಏಕರೆ ವ್ಯಾಪ್ತಿಯಲ್ಲಿರುವ ಮರಗಳನ್ನು ತೆರವುಗೊಳಿಸುವ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳಬೇಕು ಎಂದರು.

ಶಾಸಕರಾದ ಸುನೀಲ್​ ಕುಮಾರ್​ ವಿ., ಗುರ್ಮೆ ಸುರೇಶ್​ ಶೆಟ್ಟಿ, ಯಶ್​ಪಾಲ್​ ಎ. ಸುವರ್ಣ, ಗುರುರಾಜ್​ ಶೆಟ್ಟಿ ಗಂಟಿಹೊಳೆ, ಕಿರಣ್​ ಕುಮಾರ್​ ಕೊಡ್ಗಿ, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ.ಕೆ.ಅರುಣ್​, ಜಿಲ್ಲಾ ಪಂಚಾಯಿತಿ ಸಿಇಒ ಪ್ರತಿಕ್​ ಬಾಯಲ್​ , ಡಿಎಫ್​ಓ ಗಣಪತಿ, ವೈಲ್ಡ್​ ಲೈಫ್​ ಡಿಎಫ್​ಓ ಶಿವರಾಮ ಎಂ. ಬಾಬು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net