

ಉಡುಪಿ: ಜಿಲ್ಲೆಯಲ್ಲಿ ಕಾರ್ಕಳ ಹಾಗೂ ಹೆಬ್ರಿ ತಾಲೂಕು ಪೂರ್ಣ ಬರ ಪೀಡಿತ, ಬ್ರಹ್ಮಾವರ ತಾಲೂಕು ಸಾಧಾರಣ ಬರ ಪೀಡಿತ ಎಂದು ಘೋಷಿಸಲಾಗಿದೆ. ಕಾರ್ಕಳದಲ್ಲಿ 4103 ಹೆ., ಹೆಬ್ರಿಯಲ್ಲಿ 1283 ಹೆ. ಹಾಗೂ ಬ್ರಹ್ಮಾವರ ತಾಲೂಕಿನ 8551 ಹೆ. ಸೇರಿ ಒಟ್ಟು 13937 ಹೆ. ಭತ್ತದ ಬೆಳೆ ಹಾನಿ ಅಂದಾಜಿಸಿದ್ದು, 11.85 ಕೋಟಿ ರೂ. ಪರಿಹಾರ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಹೇಳಿದರು.
ಬುಧವಾರ ಅಜ್ಜರಕಾಡಿನ ಮಹಾತ್ಮಗಾಂಧಿ ಮೈದಾನದಲ್ಲಿ ನಡೆದ 68ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ವಾಡಿಕೆ ಮಳೆಯು 4418 ಮಿ.ಮೀ ಆಗಿದ್ದು, 3332 ಮೀ.ಮಿ ರಷ್ಟು ಮಳೆ ಸುರಿದು, ಶೇ. 25 ಮಳೆಯ ಕೊರತೆಯಾಗಿದೆ. ಜನಸಾಮಾನ್ಯರೂ ಸಹ ನೀರಿನ ಮಿತ ಬಳಕೆಗೆ ಮುಂದಾಗಬೇಕು. ಬಜೆ ಡ್ಯಾಂ ಹೂಳು ತೆಗೆಯಲು ಟೆಂಡರ್ ಕರೆಯಲಾಗಿದೆ. ವಾರಾಹಿಯಿಂದ ಕುಡಿಯುವ ನೀರು ಯೋಜನೆಯ ಕಾಮಗಾರಿಗಳನ್ನು ಶೀಘ್ರವಾಗಿ ಮುಗಿಸಲು ಸೂಚಿಸಲಾಗಿದೆ ಎಂದು ಹೇಳಿದರು.
ರಾಜ್ಯದ 220ಕ್ಕೂ ಹೆಚ್ಚು ತಾಲೂಕುಗಳಲ್ಲಿ ಮಳೆ ಕುಂಠಿತವಾಗಿ ಬರದ ಛಾಯೆ ಕಾಣಿಸುತ್ತಿದೆ. ತಾಲೂಕು ಮಟ್ಟದಲ್ಲಿ ಕಾರ್ಯಪಡೆಗಳನ್ನು ರಚಿಸಿ, ಬರ ನಿರ್ವಹಣೆ ಮಾಡಲಾಗುತ್ತಿದ್ದು, ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದರು.
ಸಮುದ್ರದ ಹಿನ್ನೀರಿನಿಂದಾಗಿ ಕೃಷಿ ಭೂಮಿಗಳು ಲವಣಯುಕ್ತವಾಗುವುದನ್ನು ಸಂರಕ್ಷಿಸುವ ಸಲುವಾಗಿ ಸುಮಾರು 24 ಕೋಟಿ ರೂ. ಮೊತ್ತದ ಖಾರ್ಲ್ಯಾಂಡ್ ಯೋಜನೆಗಳನ್ನು ಕೈಗೊಳ್ಳಲಾಗುವುದು. ರೂ.81.90 ಕೋಟಿ ಮೊತ್ತದ ಎರಡೂ ಏತ ನೀರಾವರಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಇದರಿಂದ 325 ಹೆಕ್ಟೇರ್ ಕೃಷಿ ಭೂಮಿಗಳಿಗೆ ನೀರಾವರಿ ಸೌಲಭ್ಯ ಒದಗಿಸಬಹುದು ಎಂದರು.
ಜಲಜೀವನ ಮಿಷನ್ ಯೋಜನೆಯಡಿ ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲು 525 ಕಾಮಗಾರಿಗಳನ್ನು 735.78 ಕೋಟಿ ರೂ. ವೆಚ್ಚಗಳಲ್ಲಿ ಕೈಗೊಳ್ಳಲಾಗಿದ್ದು, 2,47,190 ಮನೆಗಳ ನಳ ಸಂಪರ್ಕ ಗುರಿ ಹೊಂದಲಾಗಿದೆ. ಪ್ರಸಕ್ತ 1,92,065 ಮನೆಗಳಿಗೆ ನಳ ಸಂಪರ್ಕ ಕಲ್ಪಿಸಲಾಗಿದೆ. ಬಾಕಿ ಉಳಿದ ಕಾಮಗಾರಿಗಳು ಶೀಘ್ರದಲ್ಲಿಯೇ ಪೂರ್ಣಗೊಳ್ಳಲಿವೆ. ಜಿಲ್ಲೆಯ 122 ಗ್ರಾಮಗಳಿಗೆ ಬಹು ಗ್ರಾಮ ಕುಡಿಯುವ ನೀರು ಯೋಜನೆಯಡಿ 1,600 ಕೋಟಿ ರೂ. ಮೊತ್ತದ ಕಾಮಗಾರಿಯನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ. 59 ಗ್ರಾಮಗಳಿಗೆ 585 ಕೋಟಿ ರೂ. ಮೊತ್ತದ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಮಲ್ಪೆ ಮೀನುಗಾರಿಕಾ ಬಂದರು ಏಷ್ಯದ ಅತಿ ದೊಡ್ಡ ಸರ್ವಋತು ಮೀನುಗಾರಿಕೆ ಬಂದರು. ಇಲ್ಲಿ 2 ಲಕ್ಷಕ್ಕೂ ಹೆಚ್ಚು ಜನರು ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. 1950 ರ ಮೊದಲು ನಮ್ಮ ದೇಶದ ಒಟ್ಟು ಮೀನುಗಾರಿಕೆ ರಫ್ತು 5 ಕೋಟಿ ರೂ. ಗಳಾಗಿದ್ದರೆ, ಪ್ರಸ್ತುತ 57,586 ಕೋಟಿ ರೂ. ಮೀರಿದೆ. ಇದರಲ್ಲಿ ಜಿಲ್ಲೆಯ ಮೀನುಗಾರರ ಪಾತ್ರವೂ ಪ್ರಮುಖವಾಗಿದೆ. ಜಿಲ್ಲೆಯಲ್ಲಿ 7,955 ಮೋಟಾರೀಕೃತ ಆಳ ದೋಣಿಗಳು, ಯಾಂತ್ರೀಕೃತ ದೋಣಿಗಳು ಹಾಗೂ ಪಾತೀ ದೋಣಿಗಳ ಮೂಲಕ ಮೀನುಗಾರಿಕೆ ಮಾಡುತ್ತಿರುವವರಿಗೆ ಮಾರಾಟ ಕರ ರಹಿತ ದರದಲ್ಲಿ ಡೀಸೆಲ್ ಅನ್ನು ವಿತರಿಸಲಾಗುತ್ತಿದೆ. ಮೋಟಾರೀಕೃತ ಸಾಂಪ್ರದಾಯಿಕ ನಾಡದೋಣಿ ಮೀನುಗಾರರಿಗೆ ಮಾಸಿಕ 300 ಕೆ.ಎಲ್. ಸೀಮೆ ಎಣ್ಣೆಯನ್ನು ವಿತರಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ 4,714 ಪರ್ಮಿಟ್ಗಳನ್ನು ವಿತರಣೆ ಮಾಡಲಾಗಿದೆ. ಜಿಲ್ಲೆಯಲ್ಲಿ 2,516 ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ 32.95 ಕೋಟಿ ರೂ. ಸಾಲ ಸೌಲಭ್ಯವನ್ನು ವಿತರಿಸಲಾಗಿದೆ ಎಂದು ಹೇಳಿದರು. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆ ಸಮೀಕ್ಷೆಗೆ 9,77,298 ಫ್ಲಾಟ್ಗಳಲ್ಲಿ 9,70,011 ಸಂಖ್ಯೆಯ ಫ್ಲಾಟ್ಗಳ ಬೆಳೆ ಸಮೀಕ್ಷೆ ಕೈಗೊಂಡು ಶೇ. 99.25 ರಷ್ಟು ಪ್ರಗತಿ ಸಾಧಿಸಲಾಗಿದೆ. ಜಿಲ್ಲೆಯಲ್ಲಿ 3,67,343 ವಿದ್ಯುತ್ ಗೃಹ ಬಳಕೆದಾರರಿದ್ದು, 3,06,106 ಗ್ರಾಹಕರು ಗೃಹ ಜ್ಯೋತಿ ಯೋಜನೆಗೆ ನೋಂದಣಿ ಮಾಡಿಸಿಕೊಂಡಿದ್ದು, ಕಳೆದ ಆಗಸ್ಟ್ ಮತ್ತು -ಸೆಪ್ಟಂಬರ್ ತಿಂಗಳಲ್ಲಿ ಒಟ್ಟು 34.82 ಕೋಟಿ ರೂ. ರಿಯಾಯಿತಿ ನೀಡಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ 28,387 ಅಂತ್ಯೋದಯ ಕಾರ್ಡ್ ಹಾಗೂ 1,68,833 ಆದ್ಯತಾ ಪಡಿತರ ಚೀಟಿಯಲ್ಲಿ, 6,77,004 ಫಲಾನುಭವಿಗಳಿಗೆ 5 ಕೆಜಿ ಅಕ್ಕಿ ಹಾಗೂ ಅಂತ್ಯೋದಯ ಕಾರ್ಡಿಗೆ 35 ಕೆಜಿ ಅಕ್ಕಿ ವಿತರಿಸಲಾಗುತ್ತಿದೆ. ನೇರ ನಗದು ವರ್ಗಾವಣೆಯಡಿ ಫಲಾನುಭವಿಗಳಿಗೆ ಕಳೆದ ಮೂರು ತಿಂಗಳಿನಿಂದ ಈವರೆಗೆ 35.45 ಕೋಟಿ ರೂ. ಅನುದಾನ ಖಾತೆಗಳಿಗೆ ವರ್ಗಾಯಿಸಲಾಗಿದೆ. ಜಿಲ್ಲೆಯಲ್ಲಿ ಕಳೆದ ಜೂನ್ನಿಂದ ಈವರೆಗೆ 43.20 ಲಕ್ಷ ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆ ಸದುಪಯೋಗ ಪಡೆದುಕೊಂಡಿದ್ದು, ಇದಕ್ಕೆ ಸರ್ಕಾರ 15.84 ಲಕ್ಷ ರೂ. ಭರಿಸಿದೆ. ಗೃಹಲಕ್ಷ್ಮೀ ಯೋಜನೆಯಡಿ ಈವರೆಗೆ ಜಿಲ್ಲೆಯಲ್ಲಿ 2.13 ಲಕ್ಷ ಫಲಾನುಭವಿಗಳ ನೋಂದಣಿಯಾಗಿದ್ದು, 1.77 ಲಕ್ಷ ಫಲಾನುಭವಿಗಳ ಖಾತೆಗೆ 40.67 ಕೋಟಿ ರೂ. ಹಣ ಜಮಾ ಮಾಡಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಐ.ಸಿ.ಡಿ.ಎಸ್ ಯೋಜನೆಯಡಿ ಒಟ್ಟು 55,200 ಫಲಾನುಭವಿಗಳಿಗೆ ಹಾಗೂ ಮಾತೃಪೂರ್ಣ ಯೋಜನೆಯಡಿ 11,282 ಫಲಾನುಭವಿಗಳಿಗೆ ಪೂರಕ ಪೌಷ್ಠಿಕ ಆಹಾರ ಒದಗಿಸಲಾಗಿದೆ. ರಾಜ್ಯದಾದ್ಯಂತ 40 ಕೋಟಿ ರೂ. ವೆಚ್ಚದಲ್ಲಿ 4 ಸಾವಿರ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರ ಮಕ್ಕಳ ಪಾಲನೆಯ ಉದ್ಧೇಶದಿಂದ ಕೂಸಿನ ಮನೆ ಶಿಶುಪಾಲನಾ ಕೇಂದ್ರಗಳನ್ನು ತೆರೆಯಲಾಗಿದೆ. ರಾಜ್ಯದಲ್ಲಿ 100 ಗ್ರಾಮ ನ್ಯಾಯಾಲಯಗಳನ್ನು 25 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲು ಅನುಮೋದನೆ ನೀಡಲಾಗಿದೆ ಎಂದರು.
ಸಾಮಾನ್ಯ ಜನರಿಗೆ ಕಡಿಮೆ ದರದಲ್ಲಿ ಉಪಾಹಾರ, ಊಟ ಒದಗಿಸಲು ನಾಲ್ಕು ಇಂದಿರಾ ಕ್ಯಾಂಟೀನ್ಗಳನ್ನು ಪ್ರಾರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕಾಪು, ಬೈಂದೂರು ವ್ಯಾಪ್ತಿಯಲ್ಲಿ ಹೊಸದಾಗಿ ಇಂದಿರಾ ಕ್ಯಾಂಟೀನ್ಗಳನ್ನು ಪ್ರಾರಂಭಿಸಲಾಗುವುದು ಎಂದರು.
ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್, ಅಪರ ಜಿಲ್ಲಾಧಿಕಾರಿ ಮಮತಾ ದೇವಿ, ಜಿಲ್ಲಾ ಪಂಚಾಯಿತಿ ಸಿಇಒ ಪ್ರಸನ್ನ, ಅಪರ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಲಿಂಗಪ್ಪ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಉಪಸ್ಥಿತರಿದ್ದರು.