

ವಿಜಯವಾಣಿ ಸುದ್ದಿಜಾಲ ಉಡುಪಿ
ಡಾ.ಟಿಎಂಎ ಪೈ ಹಾಗೂ ಡಾ. ಬಿ.ವಿ. ಬಾಳಿಗಾ ಅವರಂತಹ ಮಹಾನ್ ವ್ಯಕ್ತಿಗಳು ಓದಿದ ಈ ಶಾಲೆಯಲ್ಲಿ ವಿದ್ಯಾರ್ಥಿಗಳು ಕಡಿಮೆಯಾಗಿದ್ದಾರೆಂದು ಮುಚ್ಚಬಾರದು. ಶಿಕ್ಷಣದ ಗುಣಮಟ್ಟ ಹೆಚ್ಚಿಸಿ ಮಕ್ಕಳು ಶಾಲೆಗೆ ಬರುವಂತೆ ಮಾಡಬೇಕು. ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವಂಥ ಕೆಲಸವನ್ನು ಎಲ್ಲರೂ ಮಾಡಬೇಕು ಎಂದು ಕಲ್ಯಾಣಪುರದ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಅನಂತಪದ್ಮನಾಭ ಕಿಣಿ ಆಶಿಸಿದರು.
ಉಡುಪಿ ಕಲ್ಯಾಣಪುರದ ಹಿಂದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂನ್ 14ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸ್ಪಂದನಾ ಸೇವಾ ಸಂಸ್ಥೆಯು ವಿದ್ಯಾರ್ಥಿಗಳಿಗೆ ನೀಡಿದ ಉಚಿತ ನೋಟ್ಬುಕ್ ವಿತರಣೆ ಹಾಗೂ ಸಂಯುಕ್ತ ಕರ್ನಾಟಕದ ಉಡುಪಿ ಜಿಲ್ಲಾ ವರದಿಗಾರ ಕಿರಣ ಮಂಜನಬೈಲು ಅವರಿಗೆ ಯಶೋ ಮಾಧ್ಯಮ-2025 ಪ್ರಶಸ್ತಿ ವಿತರಿಸಿ ಮಾತನಾಡಿದರು.
ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ನ ಉಡುಪಿ ಜಿಲ್ಲಾ ಸಂಸ್ಥೆಯ ಸ್ಕೌಟ್ಸ್ ಆಯುಕ್ತ ಜನಾರ್ದನ ಕೊಡವೂರು, ಉಡುಪಿಯ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ನ ನಿಕಟಪೂರ್ವ ಅಧ್ಯಕ್ಷೆ ಡಾ.ರಾಜಲಕ್ಷ್ಮೀ ಹಾಗೂ ಮಣಿಪಾಲ ಕಾಲೇಜ್ ಆಫ್ ನರ್ಸಿಂಗ್ನ ಡಾ. ಮರಿಯಾ ಪಯಸ್ ಮಾತನಾಡಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಉಡುಪಿಯ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ನ ಹಫೀಜ್ ರೆಹಮಾನ್, ಹಿಂದು ಹಿರಿಯ ಪ್ರಾಥಮಿಕ ಶಾಲೆಯ ಸಂಯೋಜಕರಾದ ಸುಬ್ರಹ್ಮಣ್ಯ ಕಾರಂತ, ಸುಮನಾ ಎಸ್. ಪೈ, ಖಜಾಂಚಿ ರಜನಿ ವಿ. ಪೈ, ಸ್ಪಂದನಾ ಶಾಲೆಯ ಮುಖ್ಯೋಪಾಧ್ಯಾಯ ಸಂತೋಷ, ಶಾಲೆಯ ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.
ಸ್ಪಂದನಾ ಸೇವಾ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಪೈ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸಂಸ್ಥೆಯ ಕಾರ್ಯದರ್ಶಿ ಸಂತೋಷ ಕಾಮತ ವಂದಿಸಿದರು.
ಪರ್ತಕರ್ತನಾಗಿ ಸುದ್ದಿ-ವರದಿಗಳ ಮೂಲಕ ಸಮಾಜದ ಶಾಂತಿ, ಹಿತ ಕಾಯುವ ಸಣ್ಣ ಸೇವಾಕಾರ್ಯ ಮಾಡಿದ್ದೇನೆ. ಸ್ಪಂದನಾ ಸೇವಾ ಸಂಸ್ಥೆ ನನ್ನ ಅಳಿಲು ಸೇವೆ ಗುರುತಿಸಿ ಯಶೋ ಮಾಧ್ಯಮ ಪ್ರಶಸ್ತಿ ನೀಡಿರುವುದಕ್ಕೆ ಆಭಾರಿಯಾಗಿದ್ದೇನೆ. ಸಂಸ್ಥೆಯು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಮಾಜ ಸೇವೆ ಮಾಡಲೆಂದು ಶುಭ ಹಾರೈಸುತ್ತೇನೆ. | ಕಿರಣ ಮಂಜನಬೈಲು. ಪ್ರಶಸ್ತಿ ಪುರಸ್ಕೃತ ಪತ್ರಕರ್ತ