

ಪ್ರಶಾಂತ ಭಾಗ್ವತ, ಉಡುಪಿ
ಇಂದ್ರಾಳಿಯಲ್ಲಿ ನಡೆಯುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಆಡಳಿತದ ಹಿಡಿತ ಇಲ್ಲದಾಗಿದೆ. ಕೆಲಸ ಮುಗಿಸಲು ಈವರೆಗೆ ನೀಡಿದ ಹಲವು ಗಡುವುಗಳನ್ನು ರಾ.ಹೆ. ಹೆದ್ದಾರಿ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ನುಂಗಿಹಾಕಿದ್ದಾರೆ.
ಇಂದ್ರಾಳಿಯಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿಯಿಂದಾಗಿ ದ್ವಿಪಥ ರಸ್ತೆ ಸಂಚಾರ ಮೊಟಕುಗೊಂಡಿದೆ. ಉಡುಪಿಯಿಂದ ಮಣಿಪಾಲ ಮಾರ್ಗವಾಗಿ ಎಂಜಿಎಂ ಕಾಲೇಜು ಮುಂಭಾಗದಲ್ಲಿ ಬಲಭಾಗಕ್ಕೆ ತಿರುವು ಕೊಡಲಾಗಿದೆ. ಹೀಗಾಗಿ ಸುಮಾರು ಅರ್ಧ ಕಿಮೀಯಷ್ಟು ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿದ್ದು, ನಿತ್ಯ ಸಣ್ಣಪುಟ್ಟ ಅಪಘಾತವಾಗುತ್ತಿದೆ. ಆರೇಳು ವರ್ಷದಿಂದ ಇದೇ ಪರಿಸ್ಥಿತಿ ಇಲ್ಲಿದ್ದು, ಜನರಿಗೆ ನಿತ್ಯವೂ ಸಂಚಾರ ಕಿರಿಕಿರಿ ಉಂಟಾಗಿದೆ.
ರೈಲ್ವೆ ಮೇಲ್ಸೇತುವೆ ಆಗುತ್ತದೆ ಎಂದು ಹೇಳುತ್ತಲೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಾಲಹರಣ ಮಾಡಿದ್ದಾರೆ. ಅಂತೂ ಕಳೆದ ವರ್ಷ ಜನವರಿ ಅಂತ್ಯಕ್ಕೆ ಧಾರವಾಡದಿಂದ ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆಂದು ಕಬ್ಬಿಣದ ಬೃಹತ್ ಗರ್ಡರ್ಗಳು ಉಡುಪಿಗೆ ಆಗಮಿಸಿತು. ಬಳಿಕ ಅವುಗಳು ಮೂರ್ನಾಲ್ಕು ತಿಂಗಳ ಕಾಲ ಇಂದ್ರಾಳಿಯ ಪೆಟ್ರೋಲ್ ಪಂಪ್ ಹಾಗೂ ಇಂದ್ರಾಳಿ ಶಾಲೆಯ ಮುಂಭಾಗದ ರಸ್ತೆಯಲ್ಲಿ ಒಣಗಿಸಲು ಇಟ್ಟ ರೀತಿಯಲ್ಲಿ ಇದ್ದವು.
ಮೇಲ್ಸೇತುವೆ ನಿರ್ಮಾಣಕ್ಕೆ ರೈಲ್ವೆ ಇಲಾಖೆಯಿಂದ ಎನ್ಒಸಿ ಲಭಿಸಿದೆ. ಆದರೂ ರಾ.ಹೆ. ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕಾಮಗಾರಿ ಆರಂಭಕ್ಕೆ ವಿಳಂಬ ನೀತಿ ಅನುಸರಿಸಿದರು. 20 ದಿನದೊಳಗೆ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಆಗುತ್ತದೆ ಎಂದು ಅಧಿಕಾರಿಗಳೂ ಮಾಹಿತಿ ನೀಡಿದರು. ಇನ್ನೇನು ಮಳೆಗಾಲ ಆರಂಭವಾಗುತ್ತದೆ ಎನ್ನುವಾಗ ಗರ್ಡರ್ ಜೋಡಿಸುವ ಕಾಮಗಾರಿ ಅಂತೂ ಆರಂಭವಾಯಿತು. ಆದರೆ, ಭಾರಿ ಮಳೆಯ ನೆಪದಿಂದ ಕೆಲಸ ಮತ್ತೆ ಸ್ಥಗಿತಗೊಂಡಿತ್ತು.
ಇಂದ್ರಾಳಿಯಲ್ಲಿ ಸೇತುವೆ ನಿರ್ಮಾಣದ ಗುತ್ತಿಗೆದಾರರು ಅತ್ಯಂತ ವಿಳಂಬದ ಕಾಮಗಾರಿ ಹಿನ್ನೆಲೆಯಲ್ಲಿ ಹಾಗೂ ಜಿಲ್ಲಾಡಳಿತ ನೀಡುತ್ತಿದ್ದ ಎಲ್ಲ ಗಡುವುಗಳನ್ನೂ ಮೀರುತ್ತಿದ್ದ ಹಿನ್ನೆಲೆಯಲ್ಲಿ ಜನವರಿ 17ರ ಒಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಮುಚ್ಚಳಿಕೆ ಬರೆಸಿಕೊಳ್ಳಲಾಗಿತ್ತು. ಉಡುಪಿಯ ಠಾಣೆಯಲ್ಲಿ ಸ್ವತ: ಗುತ್ತಿಗೆದಾರನೇ ಮುಚ್ಚಳಿಕೆ ಬರೆದುಕೊಟ್ಟಿದ್ದಾಗಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಮಾಧ್ಯಮದವರಿಗೆ ಮಾಹಿತಿ ನೀಡಿದ್ದರು. ಆದರೆ, ಯಾವುದಕ್ಕೂ ಇಲ್ಲಿ ಬೆಲೆ ಇಲ್ಲ ಎನ್ನುವುದು ಸಾರ್ವಜನಿಕರಲ್ಲೂ ಅಸಮಾಧಾನ ಮೂಡಿಸಿದೆ.
ಇಂದ್ರಾಳಿ ಪೆಟ್ರೋಲ್ ಪಂಪ್ ಮುಂಭಾಗದಲ್ಲೇ ಗರ್ಡರ್ಗಳನ್ನು ಜೋಡಿಸುತ್ತಿದ್ದು, ವೆಲ್ಡಿಂಗ್ ಕಾಮಗಾರಿ ಮುಗಿದ ಬಳಿಕ ಅದನ್ನು ಬೃಹತ್ ಕ್ರೇನ್ ಮೂಲಕ ಎಳೆದು ನಿಗದಿತ ಸ್ಥಳಕ್ಕೆ ಜೋಡಿಸಬೇಕಿದೆ. ಸೇತುವೆ ನಿರ್ಮಾಣದ ಆರಂಭದಲ್ಲಿ ಇದ್ದ ಯೋಜನೆಯ ನೀಲಿನಕ್ಷೆ ಬದಲಾಗಿದ್ದರಿಂದ ಹಾಗೂ ಪ್ರತಿಯೊಂದಕ್ಕೂ ರೈಲ್ವೆ ಇಲಾಖೆಯಿಂದ ಅನುಮತಿ ಪಡೆಯಬೇಕಾಗಿದ್ದರಿಂದ ಕಾಮಗಾರಿ ನಿಧಾನವಾಗಲು ಕಾರಣ ಎನ್ನಲಾಗುತ್ತಿದೆ. ಈಗಾಗಲೇ ನೀಡಿದ ಎಲ್ಲ ಗುಡುವುಗಳನ್ನು ಮೀರಿರುವ ಗುತ್ತಿಗೆ ಪಡೆದ ಕಂಪನಿಯು, ಫೆಬ್ರವರಿ ಅಂತ್ಯದವರೆಗೆ ಜಿಲ್ಲಾಡಳಿತದಲ್ಲಿ ಸಮಯಾವಕಾಶ ಕೇಳಿದ್ದಾಗಿ ತಿಳಿದುಬಂದಿದೆ.
ನಿಗದಿತ ಸಮಯದಲ್ಲಿ ಕೆಲಸ ಮುಗಿಸುವಂತೆ ಸಾಕಷ್ಟುಸಲ ರಾ.ಹೆ. ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಲಾಗಿತ್ತು. ಆದರೆ, ಪ್ರತಿ ಹಂತದ ಕೆಲಸಕ್ಕೂ ಸಹ ರೈಲ್ವೆ ಇಲಾಖೆಯಿಂದ ಅನುಮತಿ ಪಡೆಯಬೇಕಿದೆ. ದೆಹಲಿ, ಮುಂಬೈ ಹಾಗೂ ಕಾರವಾರದ ರೈಲ್ವೆ ಇಲಾಖೆಗಳಿಗೆ ನಾನೇ ಖುದ್ದು ಪತ್ರ ಬರೆದು ಅನುಮತಿ ಪಡೆದಿದ್ದೇನೆ. ಸೇತುವೆ ಕೆಲಸದ ಸ್ಥಳದಲ್ಲೂ ಕೆಲವು ತೊಡಕುಗಳಿವೆ. ತುಂಬ ವಿಳಂಬ ಆಗಿರುವುದು ಸತ್ಯ. ಫೆಬ್ರವರಿ ಅಂತ್ಯಕ್ಕೆ ಸೇತುವೆ ಕೆಲಸ ಮುಗಿಯಬಹುದು. | ಡಾ. ಕೆ.ವಿದ್ಯಾಕುಮಾರಿ. ಜಿಲ್ಲಾಧಿಕಾರಿ. ಇಂದ್ರಾಳಿಯಲ್ಲಿ ಕಾಮಗಾರಿ ವಿಳಂಬದಿಂದಾಗಿ ಜನರಲ್ಲಿ ಅಸಮಾಧಾನ ಉಂಟಾಗಿದ್ದು ನಿಜ. ಆದರೆ, ಆರು ವರ್ಷದಲ್ಲಿ ಆಗದ ಕಾರ್ಯ ನಾನು ಸಂಸದನಾದ ಬಳಿಕ ಕೇವಲ ಆರೇ ತಿಂಗಳಲ್ಲಿ ಆಗಿರುವುದೂ ಅಷ್ಟೇ ಸತ್ಯ. ಜ.17ರ ಒಳಗೆ ಕಾಮಗಾರಿ ಮುಗಿಸುವುದಾಗಿ ಗುತ್ತಿಗೆದಾರರು ಪೊಲೀಸ್ ಸ್ಟೇಷನ್ನಲ್ಲಿ ಲಿಖತವಾಗಿ ತಿಳಿಸಿದ್ದು, ಮಾತು ಮೀರಿದ್ದಾರೆ. ಹೀಗಾಗಿ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಚಿಂತನೆ ಮಾಡಿದ್ದು, ಈ ಕುರಿತು ಡಿಸಿ, ಎಸ್ಪಿ ಅವರಲ್ಲಿ ಒಮ್ಮೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. | ಕೋಟ ಶ್ರೀನಿವಾಸ್ ಪೂಜಾರಿ. ಸಂಸದ, ಉಡುಪಿ