ಹಿರಿಯಡ್ಕದಲ್ಲಿ ಕೃಷಿ ಮೇಳ ಉದ್ಘಾಟನೆ

20230303_110542
Published on

ಉಡುಪಿ : ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಪಾರಂಪರಿಕ ಕೃಷಿಯಲ್ಲಿ ತೊಡಗಿದ್ದ ರೈತರು ಇತ್ತೀಚೆಗೆ ವಿಪರೀತ ಅಡಿಕೆ ಬೆಳೆಗೆ ಮೊರೆ ಹೋಗುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಆಯಾ ಭಾಗದ ಮಣ್ಣಿನ ಫಲವತ್ತತೆಯನ್ನು ತಿಳಿದುಕೊಂಡು ಅದಕ್ಕೆ ಪೂರಕ ಬೆಳೆಯನ್ನು ಬೆಳೆಸುವುದು ಸೂಕ್ತ ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು.

ಶುಕ್ರವಾರ ಹಿರಿಯಡ್ಕ ವೀರಭದ್ರ ದೇವಸ್ಥಾನ ಬಾಕಿಮಾರು ಗದ್ದೆಯಲ್ಲಿ ವೆನಿಲ್ಲಾ ಅಭಿವೃದ್ಧಿ ಟ್ರಸ್ಟ್, ಹೆರ್ಗ ವ್ಯವಸಾಯ ಸೇವಾ ಸಹಕಾರಿ ಸಂಘ,  ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಜಿಲ್ಲಾ ಕೃಷಿಕ ಸಂಘ ಸಹಯೋಗದಲ್ಲಿ ನಡೆದ ಕೃಷಿ ಮೇಳ ಮತ್ತು ಸಾಂಸ್ಕೃತಿಕ ವೈಭವ ಉದ್ಘಾಟಿಸಿ ಅವರು ಮಾತನಾಡಿದರು.

ಮುಂದಿನ ಪೀಳಿಗೆಯ ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಆಗಬೇಕು. ಸರ್ಕಾರ ರೈತರ ಬದುಕು ಹಸನ ಗೊಳಿಸಲು ಪ್ರಯತ್ನ ನಡೆಸುತ್ತಿದ್ದು, ವಿವಿಧ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಕೃಷಿಯಲ್ಲಿ ನಷ್ಟಕ್ಕೆ ವಿಜ್ಞಾನಿಗಳನ್ನು ದೂರ ಬದಲು ಕೃಷಿ ಪ್ರಯೋಗಗಳಿಗೆ ವಿಜ್ಞಾನಿಗಳ ಸಹಕಾರ ತೆಗೆದುಕೊಂಡು ಪ್ರಯೋಗಶೀಲತೆ ಬೆಳೆಸಿಕೊಳ್ಳಬೇಕು ಎಂದರು.

ಹೆರ್ಗ ವ್ಯವಸಾಯ ಸೇವಾ ಸಹಕಾರಿ ಸಂಘ ಅಧ್ಯಕ್ಷ ದಿನಕರ ಶೆಟ್ಟಿ ಹೆರ್ಗ ವಸ್ತು ಪ್ರದರ್ಶನ ಉದ್ಘಾಟಿಸಿದರು. ಶಾಸಕ ಲಾಲಾಜಿ ಮೆಂಡನ್, ಬೊಮ್ಮರಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಲತಾ ಎಸ್., ರಾಷ್ಟ್ರೀಯ ಮಹಿಳಾ ಆಯೋಗ ಮಾಜಿ ಸದಸ್ಯೆ ಶಾಮಲಾ ಕುಂದರ್, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್, ಕೃಷಿ ಮೇಳ ಗೌರವಾಧ್ಯಕ್ಷ ಪಳ್ಳಿ ನಟರಾಜ ಹೆಗ್ಡೆ, ಹೆರ್ಗ ವ್ಯವಸಾಯ ಸೇವಾ ಸಂಘದ ಸಿಇಒ ರಮೇಶ ನಾಯಕ್, ರೈತರ ಸಹಕಾರಿ ಸಂಘ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಶಿವಮೊಗ್ಗ ಕೃಷಿ ವಿಶ್ವವಿದ್ಯಾನಿಲಯ ಸಂಶೋಧನಾ ನಿರ್ದೇಶಕ ಡಾ. ಮೃತ್ಯುಂಜಯ ವಾಲಿ, ವಿಸ್ತರಣಾ ನಿರ್ದೇಶಕ ಡಾ.ಬಿ. ಹೆಮ್ಲಾ ನಾಯಕ್, ಬ್ರಹ್ಮಾವರ ಕೃಷಿಕೇಂದ್ರ ಸಹ ಸಂಶೋಧನಾ ನಿರ್ದೇಶಕ ಡಾ. ಲಕ್ಷ್ಮಣ್, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಭುವನೇಶ್ವರಿ, ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲು ರಾಮಕೃಷ್ಣ ಶರ್ಮ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net