

ಉಡುಪಿ: ಜಿಲ್ಲೆಯಲ್ಲಿ 4 ಲಕ್ಷ ಹಾಗೂ ದ.ಕ. ಜಿಲ್ಲೆಯಲ್ಲಿ 6 ಲಕ್ಷ ಕಟ್ಟಡ ಹಾಗೂ ಮನೆಗಳಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಲು ನಿರ್ಧರಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಹೇಳಿದರು.
ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ.8 ಮತ್ತು 9ರಂದು ಜಿಲ್ಲೆಯ ಎಲ್ಲಾ ಗ್ರಾಪಂಗಳಲ್ಲಿ ಪೂರ್ವಸಿದ್ಧತಾ ಸಭೆ, 10 ಮತ್ತು 11ರಂದು ಧ್ವಜವಿತರಣಾ ಕಾರ್ಯ, 13ರಂದು ಎಲ್ಲಾ ಮನೆಗಳಲ್ಲಿ ಧ್ವಜಾರೋಹಣ ನಡೆಯಲಿದೆ ಎಂದು ಹೇಳಿದರು.
ಆ.13 ರಿಂದ ರಾಜ್ಯದ 5 ರಂಗಾಯಣ ತಂಡಗಳಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಶಾಲೆ-ಕಾಲೇಜುಗಳಲ್ಲಿ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರ ಕಥೆಯನ್ನೊಳಗೊಂಡ 1 ಗಂಟೆಯ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು. ದೇಶಾದ್ಯಂತ ಏಕರೂಪದ ಕಾರ್ಯಕ್ರಮ ನಡೆಯುವುದರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವೆಬ್ಸೈಟ್ನಲ್ಲಿ ಹರ್‌ಘರ್ ತಿರಂಗಾ ಹಿಂದಿ ಲಿಪಿಯಲ್ಲಿದೆ. ಇ-ಆಡಳಿತ ವಿಭಾಗದವರು ಅದನ್ನೇ ಬಳಸಿಕೊಂಡಿದ್ದಾರೆ. ಇದರಲ್ಲಿ ಗೊಂದಲ ಉಂಟು ಮಾಡುವುದು ಸಲ್ಲದು ಎಂದು ಹೇಳಿದರು.
ಸಿದ್ದು - ಡಿಕೆಶಿ ಆಲಿಂಗನ ತಾತ್ಕಾಲಿಕ
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಆಲಿಂಗನ ಸಹಜವಾದುದಲ್ಲ. ಯಾರದ್ದೋ ಸೂಚನೆಯಿಂದ ಮಾಡಿದ ಬಲವಂತದ ಆಲಿಂಗನ ತುಂಬಾ ದಿನ ಉಳಿಯುವುದಿಲ್ಲ. ಬೇಗ ಡೈವೋರ್ಸ್ ಆಗುತ್ತದೆ ಎಂದರು.
ಬೆಂಗಳೂರು ಬಿಬಿಎಂಪಿಯಲ್ಲಿ ಈ ಹಿಂದೆ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಎಷ್ಟು ಪಾರದರ್ಶಕವಾಗಿ ಮೀಸಲಾತಿ ಜಾರಿಗೆಗೊಳಿಸಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ನಮ್ಮ ಸರ್ಕಾರ ಪಾರದರ್ಶಕವಾಗಿ ಮೀಸಲಾತಿ ಜಾರಿಗೆಗೊಳಿಸುತ್ತಿದ್ದು, ಸಾರ್ವಜನಿಕರಿಂದ ಆಕ್ಷೇಪಗಳನ್ನು ಆಹ್ವಾನಿಸಿದ್ದೇವೆ. ಜಮೀರ್ ಅಹಮ್ಮದ್ ಅವರಿಗೆ ಆಕ್ಷೇಪಗಳಿದ್ದರೆ ಸಲ್ಲಿಸಲಿ ಎಂದರು.